ಕೆಪಿಎಸ್ಸಿ ಕರ್ಮಕಾಂಡ: ತಪ್ಪಿತಸ್ಥರನ್ನು ಕಿತ್ತೊಗೆಯಿರಿ, ಇಲ್ಲವೇ ಆಯೋಗವೇ ಮುಚ್ಚಿ!
ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನೇಮಕಾತಿ ಪ್ರಕ್ರಿಯೆಯಲ್ಲಿ ಕೇಳಿಬರುತ್ತಿರುವ ಅಕ್ರಮಗಳ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆರೋಪಗಳು ಸಾಬೀತಾದರೆ ಸಂಬಂಧಪಟ್ಟ ಉನ್ನತಾಧಿಕಾರಿಗಳನ್ನು ವಜಾಗೊಳಿಸಬೇಕು; ಇಲ್ಲದಿದ್ದರೆ ಆಯೋಗದ ಮೇಲಿನ ಸಾರ್ವಜನಿಕರ ವಿಶ್ವಾಸ ಉಳಿಯುವುದಿಲ್ಲ ಎಂದು ಬಿಜೆಪಿ ಓಬಿಸಿ ಮೋರ್ಚಾದ ನಗರಾಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, “ಅರ್ಹ ಅಭ್ಯರ್ಥಿಗಳಿಗೆ ನ್ಯಾಯಸಮ್ಮತವಾಗಿ ಉದ್ಯೋಗ ಸಿಗಬೇಕಾದ ಸಂದರ್ಭದಲ್ಲಿ ಭ್ರಷ್ಟಾಚಾರದ ಆರೋಪಗಳು ಕೇಳಿಬರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ. ಕರ್ನಾಟಕ ಲೋಕಸೇವಾ ಆಯೋಗವು ಯಾವುದೇ ಒತ್ತಡಕ್ಕೆ ಮಣಿಯದೆ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು” ಎಂದು ತಿಳಿಸಿದ್ದಾರೆ.
ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಕುರಿತು ಆಡಿಯೋ ಹಾಗೂ ವಿಡಿಯೋಗಳು ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸಂಪೂರ್ಣ ಸತ್ಯಾಂಶವನ್ನು ಹೊರತರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕೆಲವು ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ಪಾತ್ರದ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರನ್ನು ಕಾನೂನು ಮುಂದೆ ತಂದು ನಿಲ್ಲಿಸಬೇಕು. ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡ ಪರಿಣಾಮ ಅರ್ಹ ಅಭ್ಯರ್ಥಿಗಳು ಮಾನಸಿಕ ಸಂಕಷ್ಟಕ್ಕೆ ಒಳಗಾಗಿದ್ದು, ಅವರ ಭವಿಷ್ಯ ಅನಿಶ್ಚಿತವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರಕರಣದ ತನಿಖೆಯನ್ನು ಕೇವಲ ಸಿಐಡಿಗೆ ಸೀಮಿತಗೊಳಿಸದೆ, ಸಿಬಿಐಗೆ ವಹಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತನಿಖೆಯಲ್ಲಿ ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇದರಿಂದ ಮುಂದಿನ ದಿನಗಳಲ್ಲಿ ಇಂತಹ ಅಕ್ರಮಗಳಿಗೆ ಯಾರೂ ಮುಂದಾಗದಂತೆ ತಡೆಯಾಗಲಿದೆ ಎಂದು ದೇವಿಂದ್ರ ದೇಸಾಯಿ ಕಲ್ಲೂರ ಸರ್ಕಾರವನ್ನು ಆಗ್ರಹಿಸಿದ್ದಾರೆ.



















