ಅಥಣಿ : ಮಾದಕ ಮುಕ್ತ ಸಮಾಜಕ್ಕೆ ಮುನ್ನುಡಿ
ಅಥಣಿಯಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಪೊಲೀಸ್ ಇಲಾಖೆಯಿಂದ ಬೃಹತ್ ಜಾಗೃತಿ ಪ್ರಮುಖ ರಸ್ತೆಯ ಸಂಚರಿಸುವ ಮೂಲಕ ಜಾಥಾ
ಯುವ ಪೀಳಿಗೆಯನ್ನು ತಪ್ಪು ದಾರಿಗೆಳೆಯುತ್ತಿರುವ ಹಾಗೂ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಮಾದಕ ದ್ರವ್ಯಗಳ ಭೀಕರ ಪಿಡುಗಿನ ವಿರುದ್ಧ ಅಥಣಿ ಪಟ್ಟಣದಲ್ಲಿ ಬೃಹತ್ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಬೆಳಗಾವಿ ಜಿಲ್ಲಾ ಪೊಲೀಸ್, ಅಥಣಿ ಪೊಲೀಸ್ ಠಾಣೆ ಹಾಗೂ ಪಟ್ಟಣದ ವಿವಿಧ ಕಾಲೇಜುಗಳು ಮತ್ತು ಶಿಕ್ಷಣ ಇಲಾಖೆ ಮತ್ತು ಎಲ್ಲ ಶಾಲೆಯ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಈ ವಿಶೇಷ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ
ಅಥಣಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಒಟ್ಟಾಗಿ ಜಾಗೃತಿ ಜಾಥಾ ನಡೆಸಿದರು. ಮಾದಕ ವ್ಯಸನ ನಿರೋಧಕ ಘೋಷಣೆಗಳಿರುವ ಫಲಕಗಳನ್ನು ಹಿಡಿದು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಪೊಲೀಸ್ ಅಧಿಕಾರಿಗಳು, ಉಪನ್ಯಾಸಕರು ಹಾಗೂ ಗಣ್ಯರು ಉಪಸ್ಥಿತರಿದ್ದರು. ಸಭೆಯಲ್ಲಿ ಭಾಗವಹಿಸಿದ್ದ ನೂರಾರು ವಿದ್ಯಾರ್ಥಿಗಳು “ಡ್ರಗ್ಸ್‌ನಿಂದ ದೂರವಿರಿ, ಆರೋಗ್ಯದಿಂದ ಬಾಳಿ” ಎಂಬ ಘೋಷಣೆಗಳ ಫಲಕಗಳನ್ನು ಪ್ರದರ್ಶಿಸಿದರು. ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಮತ್ತು ಯುವಕರಿಗೆ ಮನವರಿಕೆ ಮಾಡಿಕೊಡಲಾಯಿತು ಹಾಗೂ ಯಾವುದೇ ಕಾರಣಕ್ಕೂ ಇಂತಹ ಕೆಟ್ಟ ಹವ್ಯಾಸಗಳಿಗೆ ಬಲಿಯಾಗುವುದಿಲ್ಲ ಎಂದು ಸಂಕಲ್ಪ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪೊಲೀಸ್ ಅಧಿಕಾರಿಗಳು, “ಮಾದಕ ದ್ರವ್ಯಗಳ ಸೇವನೆ ಇಡೀ ಕುಟುಂಬವನ್ನು ಬೀದಿಗೆ ತರುತ್ತದೆ. ವಿದ್ಯಾರ್ಥಿಗಳು ಇಂತಹ ಜಾಲಕ್ಕೆ ಸಿಲುಕದೆ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು.
ಈ ಸಂದರ್ಭದಲ್ಲಿ ಅಥಣಿ ಪೊಲೀಸ್ ಠಾಣೆಯ ಅಧಿಕಾರಿ ಪ್ರಶಾಂತ ಮುನ್ನೋಳ್ಳಿ, ಡಿ ವಾಯ ಎಸ್ ಪಿ ಸಂತೋಷ ಹಳ್ಳೂರ, ಸಿಪಿಐ ಅಥಣಿ, ಪಿ.ಎಸ್.ಐ ಗಿರಿಮಲ್ಲಪ್ಪ ಉಪ್ಪಾರ, ಸಿಬ್ಬಂದಿ ವರ್ಗದ ಎಮ್.ಆರ್. ಮುಂಜೆ, ಬಸಗೌಡ ಕಾಗೆ ಸೇರಿದಂತೆ ಅನೇಕ ಉಪಸ್ಥಿತರಿದ್ದರು.
ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಶಿಕ್ಷಕರು ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


















