ಯರಝರಿ ಗ್ರಾ.ಪಂ. ಅನುದಾನದಲ್ಲಿ ಅಕ್ರಮ: ಪಿಡಿಒ ವಿಜಯ ಮುದಗಲ್ ಅಮಾನತುಗೊಳಿಸಿ ಆಯುಕ್ತರ ಆದೇಶ.
———-
ಅನುದಾನ ದುರುಪಯೋಗ: ಬಾದಾಮಿ ತಾಲ್ಲೂಕು ಅಧೀಕ್ಷಕಿ ವಿಜಯ ಮುದಗಲ್ ಅಮಾನತು.
————
ಅನುದಾನ ದುರುಪಯೋಗ ಆರೋಪ: ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಮಾನತು
ಮುದ್ದೇಬಿಹಾಳ: ಯರಝರಿ ಗ್ರಾಮ ಪಂಚಾಯಿತಿಯಲ್ಲಿ ಅನುದಾನ ದುರುಪಯೋಗಪಡಿಸಿಕೊಂಡ ಆರೋಪದ ಮೇರೆಗೆ, ಅಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ಹಾಗೂ ಪ್ರಸ್ತುತ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕು ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವಿಜಯ ಮುದಗಲ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಆದೇಶ ಹೊರಡಿಸಿದೆ.
ಪ್ರಕರಣದ ವಿವರ:
ವಿಜಯ ಮುದಗಲ್ ಅವರು 2019-20 ರಿಂದ 2021-22ನೇ ಅವಧಿಯಲ್ಲಿ ಯರಝರಿ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿದ್ದಾಗ, ಎಸ್.ಸಿ/ಎಸ್.ಟಿ ಜನಾಂಗದ ಅಭಿವೃದ್ಧಿಗಾಗಿ ಮೀಸಲಿರಿಸಿದ್ದ ₹7,77,769 ಹಾಗೂ ವಿಶೇಷ ಚೇತನರ ಅಭಿವೃದ್ಧಿಗಾಗಿ ಮೀಸಲಿದ್ದ ₹4,86,747 ಅನುದಾನವನ್ನು ಬಳಸುವಲ್ಲಿ ವಿಫಲರಾಗಿದ್ದರು. ಅಲ್ಲದೆ, 14 ಮತ್ತು 15ನೇ ಹಣಕಾಸು ಯೋಜನೆಯಲ್ಲಿ ಕ್ರಮವಾಗಿ ₹16,84,184 ಮತ್ತು ₹32,931 ಸೇರಿ ಒಟ್ಟು ₹17,17,115 ಮೊತ್ತವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ಕುರಿತು ಮುದ್ದೇಬಿಹಾಳ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸಲ್ಲಿಸಿದ್ದ ವರದಿಯನ್ನು ಪರಿಶೀಲಿಸಿದ ವಿಜಯಪುರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಆರೋಪಿತ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪ್ರಸ್ತಾವನೆ ಸಲ್ಲಿಸಿದ್ದರು.
ಆಯುಕ್ತರ ಆದೇಶ:
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ 1957ರ ನಿಯಮ 10ರಡಿ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರಾದ ಡಾ. ಅರುಂಧತಿ ಚಂದ್ರಶೇಖರ್ ಅವರು, ವಿಜಯ ಮುದಗಲ್ ಅವರ ಮೇಲೆ ಇಲಾಖಾ ವಿಚಾರಣೆ ಬಾಕಿ ಇರಿಸಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜೂನ್ 4, 2026ರಂದು ಆದೇಶ ಹೊರಡಿಸಿದ್ದಾರೆ. ಅಮಾನತಿನ ಅವಧಿಯಲ್ಲಿ ಅವರು ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ಕೇಂದ್ರಸ್ಥಾನ ಬಿಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.