ಮನೋರಮಾ ಮಧ್ವರಾಜ ಪ್ರೌಢಶಾಲೆಗೆ ಶೇ.97.05 ಫಲಿತಾಂಶ – ಅದ್ಭುತ ಸಾಧನೆ’
ಅಫಜಲಪುರ: ಪಟ್ಟಣದ ಮಾತೋಶ್ರೀ ಮನೋರಮಾ ಮಧ್ವರಾಜ ಪ್ರೌಢಶಾಲೆಯ ವಿದ್ಯಾರ್ಥಿಗಳು 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿನಲ್ಲೇ ಶೇ.97.05 ಫಲಿತಾಂಶ ಸಾಧಿಸಿ ಗಮನಾರ್ಹ ಸಾಧನೆ ಮೆರೆದಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯರಾದ ಬಸವರಾಜ ನಿಂಬರ್ಗಿ ಅವರು, “ಈ ವರ್ಷ ಒಟ್ಟು 34 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 33 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಪರಿಶ್ರಮ ಮತ್ತು ಶಿಕ್ಷಕರ ಸಮರ್ಪಿತ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ” ಎಂದು ಹೇಳಿದರು.
ಪರೀಕ್ಷೆಯಲ್ಲಿ ಪ್ರೀತಮ್ ಕಡಬರ್ ಅವರು 625ಕ್ಕೆ 525 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದರೆ, ಶಿವಾನಿ ಅಂಬದಾಸ ಅಳ್ಳಗಿಕರ್ ಅವರು 625ಕ್ಕೆ 502 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಗಳಿಸಿದ್ದಾರೆ. ಉಳಿದ ವಿದ್ಯಾರ್ಥಿಗಳು ತೃತೀಯ, ನಾಲ್ಕನೇ ಮತ್ತು ಐದನೇ ಸ್ಥಾನಗಳನ್ನು ಪಡೆದು ಉತ್ತಮ ಸಾಧನೆ ತೋರಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಯಂಕಂಚಿ ಅವರು, “ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೂಡ ಶ್ರಮ ಮತ್ತು ಸರಿಯಾದ ಮಾರ್ಗದರ್ಶನ ಇದ್ದರೆ ಉನ್ನತ ಸಾಧನೆ ಮಾಡಬಹುದು ಎಂಬುದಕ್ಕೆ ನಮ್ಮ ಶಾಲೆಯ ಫಲಿತಾಂಶವೇ ಸಾಕ್ಷಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಫಲಿತಾಂಶಕ್ಕಾಗಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ” ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಬಸವರಾಜ ಸಪ್ಪನಗೋಳ ಅವರು, “ವಿದ್ಯಾರ್ಥಿಗಳ ಪರಿಶ್ರಮ, ಪೋಷಕರ ಸಹಕಾರ ಹಾಗೂ ಶಿಕ್ಷಕರ ನಿಷ್ಠೆಯ ಪ್ರಯತ್ನದಿಂದ ಈ ಯಶಸ್ಸು ಸಾಧ್ಯವಾಗಿದೆ. ಮುಂದಿನ ವರ್ಷಗಳಲ್ಲಿ ಶೇ.100 ಫಲಿತಾಂಶ ಸಾಧಿಸುವುದು ನಮ್ಮ ಗುರಿ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ವಿದ್ಯಾರ್ಥಿಗಳ ಸಾಧನೆಗೆ ಸರ್ವ ಆಡಳತ ಮಂಡಳಿ ಸದಸ್ಯರು ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.
.