ಅಫಜಲಪುರ ಪೋಲಿಸರಿಂದ ಕಾರ್ಯಾಚರಣೆ
ಅಕ್ರಮ ಮರಳು ಸಾಗಾಣಿಕೆ ಟ್ರ್ಯಾಕ್ಟರ್ ಜಪ್ತಿ
ಅಫಜಲಪುರ:ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಅಫಜಲಪುರ ತಾಲೂಕಿನಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ ಎಂದು ಇತ್ತೀಚಿಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ಕೊಡುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ತಾಲೂಕಿನ ನಂದರಗಾ ಗ್ರಾಮದ ಬಳಿ ಇರುವ ಬೋರಿ ಹಳ್ಳದಿಂದ ಅಕ್ರಮವಾಗಿ ಮರಳು ಸಾಗಾಣಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಸಿಪಿಐ ಲಖನ್ ಮಸಗುಪ್ಪಿ ಆದೇಶದಂತೆ ಪೋಲಿಸ್ ಸಿಬ್ಬಂದಿಗಳಾದ ಯಲ್ಲಪ್ಪ ಭಜಂತ್ರಿ, ಆನಂದ್ ಸ್ವಾಮಿ,ಇಮಾಮ್ ಬಾಗವಾನ ಸೇರಿಕೊಂಡು ಕಾರ್ಯಾಚರಣೆ ನಡೆಸಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಟ್ಯಾಕ್ಟರ್ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.ಸೋಮವಾರ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಮಹೀಂದ್ರಾ ಕಂಪನಿ ಟ್ಯಾಕ್ಟರ್ ಸಂ.ಕೆಎ 28ಟಿಎ 7494 ಜಪ್ತಿ ಮಾಡಿಕೊಳ್ಳಲಾಗಿದೆ.4 ಲಕ್ಷ ಮೌಲ್ಯದ ಟ್ಯಾಕ್ಟರ್ ಹಾಗೂ ನೋಂದಣಿ ಸಂಖ್ಯೆ ಇಲ್ಲದ ಟ್ರಾಲಿಗೆ 1 ಲಕ್ಷ ಮೌಲ್ಯ ಹೊಂದಿದೆ. ಸರ್ಕಾರಕ್ಕೆ ಯಾವುದೇ ರಾಜಧನ ಪಾವತಿಸದೇ ಕಳ್ಳತನದಿಂದ ಮತ್ತು ಅನಧಿಕೃತವಾಗಿ ಮರಳು ಸಾಗಾಣಿಕೆ ನಡೆಸುತ್ತಿದ್ದರು.ಈ ವೇಳೆ ಟ್ಯಾಕ್ಟರ್ ವಾಹನ ಚಾಲಕ ತಪ್ಪಿಸಿಕೊಂಡು ಪರಾರಿ ಆಗಿರುವ ಬಗ್ಗೆ ಅಫಜಲಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















