ಅತ್ಯಂತ ಮಹತ್ವದ ಎಐ ಶೃಂಗಸಭೆಗೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿರುವುದು ಅಕ್ಷಮ್ಯ ಅಪರಾಧ
ವಿಜಯಪುರ : ಅತ್ಯಂತ ಮಹತ್ವದ ಎಐ ಶೃಂಗಸಭೆಗೆ ಕಾಂಗ್ರೆಸ್ ಕಾರ್ಯಕರ್ತರು ಅತ್ಯಂತ ಅಸಂಬದ್ಧ ರೀತಿಯಲ್ಲಿ ಪ್ರತಿಭಟನೆ ಮಾಡಿರುವುದು ಅಕ್ಷಮ್ಯ ಅಪರಾಧ ಹಾಗೂ ದೇಶದ್ರೋಹದ ಕೃತ್ಯವಾಗಿದೆ, ಭಾರತೀಯ ಭವ್ಯ ಜ್ಞಾನಪರಂಪರೆ ಹಾಗೂ ಘನತೆಗೆ ಕುಂದು ತರುವ ಕೆಲಸ, ಇದು ಕೇವಲ ರಾಜಕೀಯ ಪ್ರತಿಭಟನೆಯಲ್ಲ, ಅದು ವ್ಯವಸ್ಥಿತವಾಗಿ ನಡೆದ `ರಾಷ್ಟೀಯ ಅವಮಾನ’ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಗುಡುಗಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರ ನಡೆಯನ್ನು ಕಟು ಶಬ್ದಗಳಲ್ಲಿ ಟೀಕಿಸಿರುವ ಅವರು, ನಮ್ಮ ಭವ್ಯ ಭಾರತ ತಾಂತ್ರಿಕವಾಗಿ ದಿಗ್ಗಜ ರಾಷ್ಟ್ರಗಳಲ್ಲಿ ಒಂದಾಗಿದೆ, ಈ ಮಹತ್ವಕಾಂಕ್ಷೆಯ ಸಾಕಾರ ರೂಪದ ಭಾಗವಾಗಿ ಎಐ ಶೃಂಗ ಸಭೆ ನಡೆಯುತ್ತಿತ್ತು. ಆದರೆ ಈ ಮಹತ್ವದ ಈ ಸಭೆಗೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿ ಅದರಲ್ಲೂ ಅಸಂಬದ್ಧವಾಗಿ ಅಡ್ಡಿಪಡಿಸಿರುವುದು ಸ್ಪಷ್ಟವಾದ ದೇಶದ್ರೋಹ, ದೇಶದ ಜನತೆಗೆ ಮಾಡಿದ ದೊಡ್ಡ ದ್ರೋಹ, ದೇಶದ ತಾಂತ್ರಿಕ ಪರಿಣಿತರಿಗೆ ಮಾಡಿದ ಘೋರ ಅಪಮಾನ ಎಂದು ಕಾರಜೋಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಗೆ ಪ್ರಜಾಪ್ರಭುತ್ವದಲ್ಲಿ ಜಾಗವಿದೆ. ಆದರೆ, ದೇಶದ ಅತಿಥಿಗಳ ಮುಂದೆ ಬಟ್ಟೆ ಬಿಚ್ಚಿ ನಾಚಿಕೆಗೇಡಿನ ರೀತಿ ವರ್ತಿಸಿರುವುದು ನೋಡಿದರೆ ಕಾಂಗ್ರೆಸ್ ಕಾರ್ಯಕರ್ತರಿಗೆ ಮತಿಭ್ರಮಣೆಯಾಗುವುದು ಸತ್ಯ, `ಅರ್ಬನ್ ನಕ್ಸಲ್’ ಮಾನಸಿಕತೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಅವಮಾನಕಾರಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ನಡೆದುಕೊಂಡಿಇರುವುದು ಅಕ್ಷಮ್ಯ ಅಪರಾಧ, ಭಾರತವು ವಿಶ್ವಗುರುವಾಗುವ ಹಾದಿಯಲ್ಲಿ ಸಾಗುತ್ತಿರುವಾಗ, ಜಾಗತಿಕ ಹೂಡಿಕೆದಾರರು ನಮ್ಮತ್ತ ನೋಡುತ್ತಿರುವಾಗ, ಇಂತಹ ವರ್ತನೆಗಳು ದೇಶದ ವರ್ಚಸ್ಸಿಗೆ ಧಕ್ಕೆ ತಂದಿವೆ, ಇದರಿಂದಾಗಿ ಯಾವ ಭಾರತೀಯರು ಕಾಂಗ್ರೆಸ್‌ನ ಈ ದುಷ್ಟ ಹಾಗೂ ಕೀಳು ವರ್ತನೆಯನ್ನು ಕ್ಷಮಿಸುವುದಿಲ್ಲ ಎಂದು ಕಾರಜೋಳ ಹೇಳಿದ್ದಾರೆ.
ರಾಜಕೀಯ ಸಿದ್ಧಾಂತಗಳು ಏನೇ ಇರಲಿ, ದೇಶದ ಭದ್ರತೆ ಮತ್ತು ಗೌರವದ ವಿಷಯ ಬಂದಾಗ ನಾವೆಲ್ಲರೂ ಒಂದಾಗಬೇಕಲ್ಲವೇ? ಸರ್ಕಾರದ ನೀತಿಗಳನ್ನು ಟೀಕಿಸುವ ಭರದಲ್ಲಿ ದೇಶದ ಘನತೆಯನ್ನು ಮರೆಯುವುದು ಸರಿಯೇ? ಖಂಡಿತವಾಗಿಯೂ ಕಾಂಗ್ರೆಸ್ ಈ ಬೇಜವಾಬ್ದಾರಿ ನಡೆಯನ್ನೂ ಯಾರೂ ಬೆಂಬಲಿಸುವುದಿಲ್ಲ, ದೇಶಕ್ಕೆ ಅಪಮಾನಕಾರಿಯಾಗಿ ನಡೆದುಕೊಂಡಿರುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಾಗೂ ಅವರಿಗೆ ಪ್ರೇರಣೆ ನೀಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕಾರಜೋಳ ಒತ್ತಾಯಿಸಿದ್ದಾರೆ.
ಸುಳ್ಳು ದಾಖಲೆಗಳ ಮೂಲಕ ಪಾಸ್ ಪಡೆದು ವಂಚನೆ ಸಹ ಮಾಡಿದ್ದಾರೆ, ಇದರ ಹಿಂದೆ ದೊಡ್ಡ ಸಂಚು ಅಡಗಿದ್ದು ರಾಷ್ಟ್ರದ ವರ್ಚಸ್ಸಿಗೆ ಧಕ್ಕೆ ತರುವ ಇಂತಹ ಕೃತ್ಯಗಳನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.


















