ಮದರಿ ಗ್ರಾಮದ ನದಿ ತೀರದ ಜಮೀನಿನಲ್ಲಿ ಚಿರತೆ ಪ್ರತ್ಯಕ್ಷ: ಹೆಚ್ಚಿದ ಆತಂಕ
ಮುದ್ದೇಬಿಹಾಳ : ತಾಲೂಕಿನ ಕೃಷ್ಣಾ ನದಿ ತೀರದ ಮದರಿ ಗ್ರಾಮವ್ಯಾಪ್ತಿಯ ಕಬ್ಬಿನ ಗದ್ದೆಯ ಹತ್ತಿರ ಚಿರತೆಯೊಂದು ಕಾಣಿಸಿಕೊಂಡಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಕಳೆದ ಎರಡ್ಮೂರು ದಿನಗಳಿಂದ ಚಿರತೆ ಈ ಭಾಗದಲ್ಲಿ ಓಡಾಟ ನಡೆಸುತ್ತಿದ್ದು ಗ್ರಾಮದ ಸಿದ್ದಪ್ಪ ಮೇಟಿ ಎಂಬುವ ಹೊಲದ ಬಳಿ ಚಿರತೆ ಕಂಡಿರುವುದನ್ನು ಕಾರಿನಲ್ಲಿ ಕೂತು ಫೋಟೊ ಸೆರೆ ಹಿಡಿದಿರುವ ಮದರಿ ಗ್ರಾಮದ ಯುವ ಮುಖಂಡ ಶಿವು ಕನ್ನೊಳ್ಳಿ ತಿಳಿಸಿದ್ದಾರೆ. ಚಿರತೆ ಕಂಡಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದು ಸಾರ್ವಜನಿಕರ ಮತ್ತು ಅರಣ್ಯ ಇಲಾಖೆಯವರ ಗಮನಕ್ಕೆ ತಂದಿದ್ದಾರೆ.
ರಸ್ತೆ ಪಕ್ಕದಲ್ಲೇ ಚಿರತೆ ಪ್ರತ್ಯಕ್ಷವಾಗಿರುವುದು ರೈತರ ಆತಂಕ ಹೆಚ್ಚಿಸಿದ್ದು ತಾಲ್ಲೂಕು ಆಡಳಿತ ತೀವ್ರ ಕಾರ್ಯಾಚರಣೆ ನಡೆಸಿ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.