ಪಟ್ಟಣದ ಸಂಗಮೇಶ್ವರ ನಗರದ ರೇವಣ ಸಿದ್ಧೇಶ್ವರ ಪ್ರೌಢ ಶಾಲೆಯಲ್ಲಿ ರಾಷ್ಟೀಯ ಯುವ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಮುದ್ದೇಬಿಹಾಳ: ವಿವೇಕ ಸದ್ಗುಣಯುಕ್ತ ವಿದ್ಯೆಗೆ ವಿಶ್ವ ಮಾನ್ಯತೆ ಸದಾ ಇರುತ್ತದೆ ಎಂದು ಜ್ಞಾನ ಭಾರತಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ರಾಮಚಂದ್ರ ಹೆಗಡೆ ಹೇಳಿದರು.
ಪಟ್ಟಣದ ಸಂಗಮೇಶ್ವರ ನಗರದ ರೇವಣಸಿದ್ಧೇಶ್ವರ ಪ್ರೌಢ ಶಾಲೆಯಲ್ಲಿ ಆಯೋಜಿಸಿರುವ ರಾಷ್ಟೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿವೇಕಾನಂದರು ಯುವ ಜನತೆಗೆ ಸದಾ ಅನುಕರಣೀಯರಾಗಿದ್ದಾರೆ. ಸಮಯದ ಸದುಪಯೋಗ, ವಿವೇಕಪ್ರಜ್ಞೆ, ಸಂಸ್ಕಾರ ಇವೆಲ್ಲವೂ ರಕ್ತಗತವಾಗಬೇಕಾಗಿದೆ. ವಿಕಸಿತ ಭಾರತವಾಗಬೇಕಾದಲ್ಲಿ ಮಾನವ ಸಂಪನ್ಮೂಲದ ಸದ್ಬಳಕೆ ತೀರಾ ಅವಶ್ಯಕ ಎಂದು ಹೇಳಿದರು.
ಮುಖ್ಯಗುರು ಎಚ್.ಎನ್.ಇಟಗಿ ಮಾತನಾಡಿ ಬದುಕಿನ ಸಮಸ್ಯೆಗಳಿಗೆ ಆಧ್ಯಾತ್ಮದಲ್ಲಿ ಪರಿಹಾರವಿದೆ. ವಿವೇಕಾನಂದರ ಬದುಕಿನಲ್ಲಿ ಅವರ ತಾಯಿಯ ಆಧ್ಯಾತ್ಮ ಪ್ರೇರಣೆ ಮತ್ತು ಸಂಸ್ಕಾರಗಳು ಪ್ರಧಾನ ಪಾತ್ರವಹಿಸಿದೆ. ನಾವು ಉತ್ತಮಾಂಶಗಳನ್ನು ಕಷ್ಟಪಟ್ಟಾದರು ರೂಢಿಸಿಕೊಳ್ಳಲೇ ಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಎಸ್.ಬಿ.ರಾಂಪೂರ, ಬಿ.ಜಿ. ತಾಳಿಕೋಟೆ, ವಾಯ್.ಎಚ್.ಹಳೆಮನಿ, ಎಸ್.ಎಚ್.ಚಿತ್ತರಗಿ ಸೇರಿದಂತೆ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಉಪಸ್ಥಿತರಿದ್ದರು.



















