ಮಹಿಳೆಯ ಶಕ್ತಿ-ಉದ್ಯಮಶೀಲತೆಯ ಮೂಲಕ ಸ್ವಾವಲಂಬಿ ಸಮಾಜ ನಿರ್ಮಾಣ: ಮಹಾಂತೇಶ್ ಅಗಸಿಮುಂದಿ
ವಿಜಯಪುರ: ಮಹಿಳೆಯರಿಗೆ ಶಿಕ್ಷಣ, ಆರ್ಥಿಕ ಸ್ವಾವಲಂಬನ, ಸಾಮಾಜಿಕ ಮಾನ್ಯತೆ ಹಾಗೂ ನಿರ್ಧಾರ ಕೈಗೊಳ್ಳುವ ಹಕ್ಕು ದೊರಕಿದಾಗ ಮಾತ್ರ ಅವರು ತಮ್ಮ ಜೀವನವನ್ನು ಸ್ವತಂತ್ರವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಬಿಜಾಪುರದ ಇಂಟಿಗ್ರೇಟೆಡ್ ರೂರಲ್ ಡೆವಲಪ್ಮೆಂಟ್ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಅಗಸಿಮುಂದಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಾಣಿಜ್ಯ ಹಾಗೂ ವ್ಯವಹಾರ ಅಧ್ಯಯನ ವಿಭಾಗ, ಇಂಗ್ಲಿಷ್ ಅಧ್ಯಯನ ವಿಭಾಗ ಮತ್ತು ಭಾರತ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯದ ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಾ ಅಭಿಯಾನ ಪಿಎಂ ಉಷಾ ಮತ್ತು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಪರಿಷತ್ತಿನ ಅಡಿಯಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ “ಮಹಿಳಾ ಸಬಲೀಕರಣ ಮತ್ತು ಸ್ವ ಉದ್ಯೋಗ” ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತದಲ್ಲಿ ಮಹಿಳಾ ಉದ್ಯಮಿಗಳನ್ನು ಸಬಲಗೊಳಿಸುವ ಉದ್ದೇಶದಿಂದ ಸರ್ಕಾರ ಹಾಗೂ ವಿವಿಧ ಸಂಸ್ಥೆಗಳ ಮೂಲಕ ಲಭ್ಯವಿರುವ ಹಣಕಾಸು ಸಹಾಯ, ಸಾಲ ಸೌಲಭ್ಯಗಳು ಮತ್ತು ನಿಧಿ ಅವಕಾಶಗಳ ಕುರಿತು ವಿವರವಾದ ಮಾಹಿತಿ ನೀಡಿದರು. ಮಹಿಳೆಯರು ಉದ್ಯಮಶೀಲತೆಯತ್ತ ಮುಂದಾಗಲು ಈ ಆರ್ಥಿಕ ಬೆಂಬಲಗಳು ಮಹತ್ವದ ಪಾತ್ರ ವಹಿಸುತ್ತವೆ. ಸ್ವಾವಲಂಬಿ ಮಹಿಳೆಯರ ನಿರ್ಮಾಣವೇ ಸಮಾಜದ ಸಮಗ್ರ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ ಎಂದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ, ವಿಜಯಪುರದ ಸಿಡಾಕ್‌ನ ಸಂಯುಕ್ತ ನಿರ್ದೇಶಕಿ ಸುಪ್ರೀತಾ ಬಳ್ಳಾರಿ ಮಾತನಾಡಿ, ಮಹಿಳಾ ಉದ್ಯಮಿಗಳು ಎದುರಿಸುತ್ತಿರುವ ಅಡೆತಡೆಗಳು ಮತ್ತು ಸವಾಲುಗಳ ಕುರಿತು ವಿವರಿಸಿದರು. ಕುಟುಂಬ, ಹಣಕಾಸು ಹಾಗೂ ಮಾರುಕಟ್ಟೆ ಸಂಬAಧಿತ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳನ್ನು ತಿಳಿಸಿದರು.
ಕಾರ್ಯಾಗಾರದ ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ, ವಿಜಯಪುರದ ರೂಡ್‌ಸೆಟ್‌ನ ಹಿರಿಯ ಉಪನ್ಯಾಸಕ ಮಲ್ಲಿಕಾರ್ಜುನ ಹಟ್ಟಿ ಮಾತನಾಡಿ, ಮಹಿಳಾ ಉದ್ಯಮಿಗಳಿಗೆ ಲಭ್ಯವಿರುವ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾದ ಮಾರ್ಗಗಳ ಬಗ್ಗೆ ಮಾಹಿತಿ ನೀಡಿದರು.
ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಪ್ರಾಧ್ಯಾಪಕಿ ಪ್ರೊ. ಅನಿತಾ ಆರ್. ನಾಟೇಕರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಸಂಯೋಜಕ ಡಾ. ದೀಪಕ್ ಶಿಂದೆ, ಇಂಗ್ಲೀಷ್ ಅಧ್ಯಯನ ವಿಭಾಗದ ಅಧ್ಯಾಪಕ ಡಾ ಅಕ್ಷಯ ಯಾರ್ಡಿ, ವಾಣಿಜ್ಯ ವಿಭಾಗದ ಡಾ ಗಣೇಶ್ ಎಸ್ ಆರ್, ವಿಧ್ಯಾರ್ಥಿಗಳು ಮತ್ತಿತರಿದ್ದರು.



















