ರಾಜಕೀಯ ಭವಿಷ್ಯ ಬರೆದಿದ್ದು ಅಂಜುಟಗಿ : ಪಾಟೀಲ
ಇಂಡಿ : ಮತಕ್ಷೇತ್ರದ ಪ್ರತಿ ಗ್ರಾಮಗಳಿಗೆ ನೀರು, ರಸ್ತೆ, ವಿದ್ಯುತ್, ಶಿಕ್ಷಣ ಸೇರಿದಂತೆ ಮೂಲ ಸೌಕರ್ಯಗಳನ್ನು ಜನರಿಗೆ ತಲುಪಿಸಲು ಜವಾಬ್ದಾರಿ ನಾಗರಿಕ ಸಮಾಜದ ಸರಕಾರಗಳು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿ, ಪ್ರಗತಿಗಾಗಿ ಅನೇಕ ಕಾರ್ಯಕ್ರಮಗಳನ್ನು ವತಕ್ಷೇತ್ರದಲ್ಲಿ ಮಾಡಿರುವ ಹೆಮ್ಮೆಯಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲ್ಲೂಕಿನ ಅಂಜುಟಗಿ ಗ್ರಾಮದಿಂದ ಇಂಡಿ ಸ್ಟೇಷನ್ವರೆಗೆ ₹ 750 ಲಕ್ಷ ವೆಚ್ಚದಲ್ಲಿ 2 ಕಿಮೀ ರಸ್ತೆ, ಅಹಿರಸಂಗದಿಂದ ಇಂಡಿ ಸ್ಟೇಷನ್ ವರೆಗೆ ₹ 500 ಲಕ್ಷ ವೆಚ್ಚದಲ್ಲಿ 6 ಕಿಮೀ ರಸ್ತೆ, ಹಡಲಸಂಗದಿಂದ ರಾಷ್ಟ್ರೀಯ ಹೆದ್ದಾರಿ 52 ರ ವರೆಗೆ ₹ 560.35 ಲಕ್ಷ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ”ನನ್ನ ರಾಜಕೀಯ ಭವಿಷ್ಯ ಬರೆದಿದ್ದು ಅಂಜುಟಗಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು.
ರಾಜಕೀಯ ಜನ್ಮ ಕೊಟ್ಟ ತವರೂರು ಅಂಜುಟಗಿ. ಮೂರು ಬಾರಿ ಶಾಸಕನಾಗಲು ಈ ಗ್ರಾಮ ಕೈಹಿಡಿದು ಸಹಕರಿಸಿದೆ,” ಎಂದು ಹೇಳಿದರು.
”ಪ್ರಪಂಚದಲ್ಲಿಯೇ ಬಲಿಷ್ಠವಾದ ದೇಶ ಭಾರತ. ನಮ್ಮ ತಂಟೆಗೆ ಬಂದರೆ ಶತ್ರುಗಳನ್ನು ಮಟ್ಟಹಾಕಲು ಹಿಂದೆ ಸರಿಯುವ ಮಾತೇ ಇಲ್ಲ. ನಮ್ಮ ವೈರಿಗಳಿಗೆ ಬುದ್ದಿ ಕಲಿಸುವ ಸಮಯ ಬಂದಿದೆ. ಅದಕ್ಕಾಗಿ ಕೇಂದ್ರ ಸರಕಾರ ಮತ್ತು ಸೈನಿಕರಿಗೆ ಬೆಂಬಲ ನೀಡೋಣ,” ಎಂದರು.
ನಿರಂಜನ ಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು. ಜಟ್ಟೆಪ್ಪ ರವಳಿ, ಇಲಿಯಾಸ ಬೋರಾಮಣಿ, ಭೀಮ್ಮಣ್ಣ ಕೌಲಗಿ, ಸುಭಾಷ ಅಚ್ಚಿಗಾರ, ಸಾಹೇಬಗೌಡ ಪಾಟೀಲ, ಧರ್ಮಣ್ಣ ವಾಲಿಕಾರ, ಸಣ್ಣಪ್ಪ ತಳವಾರ, ನೀಲಕಂಠ ರೂಗಿ, ಅಣ್ಣಾರಾಯ ಬಬಲಾದಿ, ಸಿದ್ದರಾಯ ಬಬಲಾದಿ, ಸತೀಶ್ ಹತ್ತಿ, ಗುತ್ತಿಗೆದಾರ ಎಸ್. ಎಂ.ಉಳ್ಳಾಗಡ್ಡಿ, ಪಿ.ಬಿ.ಬಿರಾದಾರ, ಎಲ್.ಡಿ. ಮಲಗೊಂಡ ಇತರರು ಉಪಸ್ಥಿತರಿದ್ದರು.