ಡಾ.ಅಂಬೇಡ್ಕರ್ ಸಾಮಾಜಿಕ ನಾವೀನ್ಯತೆಯ ಚಿಂತಕ: ಸಂತೋಷ ಬಂಡೆ
ಇಂಡಿ : ಪರಿಶ್ರಮ ಮತ್ತು ಬೌದ್ಧಿಕ ಪ್ರತಿಭೆಯ ಮೂಲಕ ಶ್ರೇಷ್ಠ ಚಿಂತಕರಾಗಿದ್ದ ಡಾ.ಅಂಬೇಡ್ಕರ್ ಅವರ ಚಿಂತನೆಗಳು ಇಡೀ ಜಗತ್ತಿಗೆ ಪ್ರಭಾವಶಾಲಿಯಾಗಿವೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಸೋಮವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಅವರ 134 ನೇ ಜಯಂತಿ ಆಚರಣೆಯನ್ನು ಉದ್ಧೇಶಿಸಿ ಮಾತನಾಡಿದರು.
ಡಾ.ಅಂಬೇಡ್ಕರ್ ಒಬ್ಬ ಸಾಮಾಜಿಕ ನಾವೀನ್ಯತೆಯ ಚಿಂತಕರಾಗಿ, ದೀನದಲಿತ ವರ್ಗಗಳಲ್ಲಿ ಸ್ವಪ್ರಜ್ಞೆ ಮತ್ತು ಸ್ವಾಭಿಮಾನ ಮೂಡಿಸಲು ಪ್ರಯತ್ನಿಸಿದರು. ಮುಗ್ಧ ವ್ಯಕ್ತಿಯಾಗಿ ಉಳಿಯುವ ಬದಲು ಪ್ರಭಾವಶಾಲಿ ವ್ಯಕ್ತಿತ್ವವನ್ನು ಹೊಂದಬೇಕೆಂಬ ಅವರ ನಿಲುವು ಇಂದಿಗೂ ಆದರ್ಶಪ್ರಾಯವಾಗಿದೆ ಎಂದು ಹೇಳಿದರು.
ಇಂಡಿ ಸರಕಾರಿ ಐಟಿಐ ಕಾಲೇಜಿನ ಪ್ರಾಚಾರ್ಯ ಪಿ ವೈ ರಜನಿಕರ ಮಾತನಾಡಿ, ‘ಡಾ. ಅಂಬೇಡ್ಕರ್ ಅವರ ತತ್ವಶಾಸ್ತ್ರ ಮತ್ತು ವಿಚಾರಗಳು ಇಂದಿನ ಪೀಳಿಗೆಗೆ ಸ್ಪೂರ್ತಿಯಾಗಿವೆ. ಆರ್ಥಿಕ, ಸಾಮಾಜಿಕ, ರಾಜಕೀಯ ವಿಚಾರಗಳಲ್ಲಿ ಕ್ರಾಂತಿಕಾರಿ ಮನೋಭಾವ ಹೊಂದಿದ ಅವರು ಸಮಾಜದ ಏಳಿಗೆ ಮತ್ತು ರಾಷ್ಟ್ರದ ಪ್ರಗತಿಯ ಬಗ್ಗೆ ಅತ್ಯುತ್ತಮ ದೂರದೃಷ್ಟಿ ಹೊಂದಿದ್ದರು’ ಎಂದು ಹೇಳಿದರು
ಶಿಕ್ಷಕ ಎಸ್ ಆರ್ ಚಾಳೇಕರ ಮಾತನಾಡಿ, ಅಂಬೇಡ್ಕರ್ ಅವರದ್ದು ಪ್ರಬುದ್ಧ ವ್ಯಕ್ತಿತ್ವ. ತಳ ಸಮುದಾಯಗಳ ಹಾಗೂ ದಮನಿತರ ಸ್ಫೂರ್ತಿಯ ಸೆಲೆಯಾಗಿದ್ದ ಅವರು ಅಸ್ಪೃಶ್ಯತೆ ನಿವಾರಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಅವರ ಚಿಂತನೆಗಳು ಇಂದಿಗೂ ಸಾರ್ವಕಾಲಿಕ ಮೌಲ್ಯ ಪಡೆದಿವೆ ಎಂದರು.
ಮುಖ್ಯ ಶಿಕ್ಷಕ ಅನಿಲ ಪತಂಗಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕರಾದ ಎಸ್ ಎಸ್ ಅರಬ, ವ್ಹಿ ವೈ ಪತ್ತಾರ ಮತ್ತು
ಶಿಕ್ಷಕರಾದ ಶಾಂತೇಶ ಹಳಗುಣಕಿ, ಎಸ್ ಬಿ ಕುಲಕರ್ಣಿ, ಎಸ್ ಡಿ ಬಿರಾದಾರ, ಜೆ ಎಂ ಪತಂಗಿ, ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಸಾವಿತ್ರಿ ಸಂಗಮದ, ಸುಮಿತ್ರಾ ನಂದಗೊಂಡ, ಸುರೇಶ ದೊಡ್ಯಾಳಕರ, ಎಸ್ ಎನ್ ಡಂಗಿ, ಜೆ ಸಿ ಗುಣಕಿ ಹಾಗೂ ಮಕ್ಕಳು, ಪಾಲಕರು ಉಪಸ್ಥಿತರಿದ್ದರು.


















