ಇಂಡಿ |ಜಂತು ಹುಳು ಮಾತ್ರೆ ಸೇವಿಸಿ 5 ಮಕ್ಕಳು ಅಸ್ವಸ್ಥ..!
ಇಂಡಿ : ಜಂತುಹುಳು ಮಾತ್ರೆ ನುಂಗಿದ ಕೆಲವೇ ಕ್ಷಣಗಳಲ್ಲಿ 5 ಮಕ್ಕಳು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ತಾಲೂಕಿನ ಹಿರೇಬೇವನೂರ ವಿಶ್ವ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಘಟನೆಯಲ್ಲಿ ಶಾಲೆಯ ಶರತ್ ಕೋರೆ, ವಿರಾಟ್ ಚಾಂದಕವಟೆ, ಯುವರಾಜ ಸ್ವಾಮಿ, ಪ್ರೀತಮ್ ವಳಸಂಗ್, ಸಂಕೇತ ಗೊಟ್ಯಾಳ ಎಂಬ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಮಧ್ಯಾಹ್ನದ ಊಟದ ನಂತರ ಶಾಲೆಯ ಮಕ್ಕಳಿಗೆ ಜಂತುಹುಳು ಮಾತ್ರೆ ನೀಡಲಾಗಿದ್ದು, ಜಂತುಹುಳು ಮಾತ್ರೆ ನುಂಗಿದ ಒಟ್ಟು 33 ಮಕ್ಕಳಲ್ಲಿ 5 ಮಕ್ಕಳು ಹೊಟ್ಟೆ ಹುರಿ ತಾಳಲಾರದೇ ಶಾಲೆಯಲ್ಲಿ ಒದ್ದಾಡುತ್ತಿದ್ದಾಗ ಗಾಬರಿಯಾದ ಶಾಲಾ ಶಿಕ್ಷಕರು ಕೂಡಲೆ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಆಸ್ಪತ್ರೆಗೆ ಬಂದ ಮಕ್ಕಳಿಗೆ ಕೂಡಲೇ ಚಿಕಿತ್ಸೆ ನೀಡಿದ ವೈದ್ಯಾಧಿಕಾರಿಗಳು ಮಾತ್ರೆ ಸೇವನೆಯಿಂದ ಏನೂ ಆಗುವುದಿಲ್ಲ ಕೆಲವು ಮಕ್ಕಳಿಗೆ ಹೀಗಾಗುತ್ತದೆ. ಇದರಿಂದ ಪೋಷಕರು ಗಾಬರಿಪಡುವುದು ಬೇಡ ಎಂದು ಸಮಾಧಾನ ಹೇಳಿದರು.
ಒಂದು ಮಾತ್ರ ಸೇವನೆಯಿಂದ ಯಾವುದೇ ತೊಂದರೆ ಯಾಗುವುದಿಲ್ಲ. ಇದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು ಎಲ್ಲಾ ಶಾಲೆಯ ಮಕ್ಕಳು ಕೊಡುತ್ತಾರೆ. ಅಲರ್ಜಿ ಮತ್ತು ಎಸಿಡಿಟಿಯಿಂದ ಈ ರೀತಿಯ ತೊಂದರೆಯಾಗುತ್ತದೆ. ಒಂದು ಗಂಟೆಯಲ್ಲಿ ಆರೋಗ್ಯಯುತ ಮಕ್ಕಳು ಮನೆಗೆ ಮರಳುತ್ತಾರೆ .


















