ಬೆಳೆ ನಿರ್ವಹಣಾಕ್ರಮ ಅನುಸರಿಸಿ : ಡಾ. ಹೀನಾ
ಇಂಡಿ : ಹಿಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಶೇಂಗಾ, ಜೋಳ, ಕಡಲೆ,ಗೋದಿ ಕಬ್ಬು ಮತ್ತು ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ದ್ರಾಕ್ಷಿ, ಲಿಂಬೆ, ಬದನೆ ಮತ್ತು ಮೆಣಸಿನಕಾಯಿ ಬೆಳೆಗಳ ನಿರ್ವಹಣಾ ಕ್ರಮಗಳನ್ನು ಅನುಸರಿಸಲು ವಿಜ್ಞಾನಿ ಡಾ. ಹೀನಾ ಹೇಳಿದರು.
ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಿಂಗಾರು ಹಂಗಾಮಿನಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಕಂಡುಬರುವ ರೋಗ ಮತ್ತು ಕೀಟ ಬಾಧೆಗಳ ಸಮಗ್ರ ನಿರ್ವಹಣೆ ಕುರಿತು ರೈತ ಮತ್ತು ವಿಜ್ಞಾನಿಗಳ ಸಂವಾದ ಮತ್ತು ಚರ್ಚಾಗೋಷ್ಠಿಯಲ್ಲಿ ಮಾತನಾಡಿದರು.
ಸೂಕ್ತ ಸಮಯದಲ್ಲಿ ಸೂಕ್ತ ನಿರ್ವಹಣಾ ಕ್ರಮಗಳನ್ನು ಕೈಗೊಂಡಿದ್ದೆ ಆದ್ದಲ್ಲಿ, ರೈತರು ತಾವು ಬೆಳೆಯುವ ಬೆಳೆಯ ಉತ್ಪಾದನಾ ಖರ್ಚನ್ನು ಗಣನೀಯ ಕಡಿಮೆ ಮಾಡವುದಲ್ಲದೇ, ಉತ್ತಮ ಇಳುವರಿಯೊಂದಿಗೆ ಅಧಿಕ ಲಾಭವನ್ನು ಪಡೆದುಕೊಳ್ಳಬಹುದಾಗಿದೆ ಎಂದರು. ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಡಾ. ಶಿವಶಂಕರಮೂರ್ತಿ ಮಾತನಾಡಿ ಹಿಂಗಾರು ಬೆಳೆಗಳ ರೋಗ ಮತ್ತು ಕೀಟ ಬಾಧೆಗಳ ಕುರಿತು ರೈತರು ಚರ್ಚಾಗೋಷ್ಠಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಬೆಳೆಗಳಲ್ಲಿ ಕಂಡುಬರುವ ರೋಗ ಮತ್ತು ಕೀಟ ಬಾಧೆಗಳ ಕುರಿತು ಅರಿವು ಮೂಡಿಸಿಕೊಂಡು ಸೂಕ್ತ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೆಕೆಂದು ರೈತರಲ್ಲಿ ಕೋರಿದರು.
ಡಾ. ಬಾಲಾಜಿ ಡಿ. ನಾಯ್ಕ್, ಡಾ. ಪ್ರೇಮ್ ಚಂದ್ ಯು
ಮಾತನಾಡಿ ಕಬ್ಬು, ಗೋದಿ, ಜೋಳ ಮತ್ತು ಶೇಂಗಾ ಬೆಳೆಗಳಲ್ಲಿ ಕಂಡುಬರುವ ಇಟ್ಟಂಗಿ -ತುಕ್ಕು ರೋಗ, ಕಡಲೆ ಬೆಳೆಯಲ್ಲಿ ಕಾಯಿ ಕೊರಕ, ಜೋಳದಲ್ಲಿ ಸೈನಿಕ ಹುಳು, ಕಬ್ಬಿನಲ್ಲಿ ಹಿಟ್ಟು ತಿಗಣೆ ಬಾದೆ, ಈರುಳ್ಳಿಯಲ್ಲಿ ನುಸಿ ಮತ್ತು ನೇರಳೆ ಮಚ್ಚೆ ರೋಗದ ಬಾದೆ, ಲಿಂಬೆಯಲ್ಲಿ ಸೊರಗು ರೋಗ, ಸುರುಳಿ ಪೂಚಿ ಕೀಟ ಮತ್ತು ಹಿಟ್ಟು ತಿಗಣೆ ಬಾದೆ, ದಾಳಿಂಬೆ ಬೆಳೆಯಲ್ಲಿ ಕಜ್ಜಿ ಮತ್ತು ಸೊರಗು ರೋಗ ಬಾದೆ, ದ್ರಾಕ್ಷಿಯಲ್ಲಿ ಬೂದಿ ಮತ್ತು ಬೂಜು ತುಪ್ಪಟ ರೋಗ ಬಾದೆ, ಬದನೆ ಮತ್ತು ಮೆಣಸಿನ ಬೆಳೆಯಲ್ಲಿ ಸರ್ವೆ ಸಾಮಾನ್ಯವಾಗಿ ಕಂಡುಬರುವ ಕುಡಿ ಮತ್ತು ಕಾಯಿ ಕೊರಕ, ಥ್ರಿಪ್ಸ್ ಮತ್ತು ನುಸಿ ರೋಗ ಬಾದೆಯ ಕುರಿತು ಧೀರ್ಘ ಚರ್ಚೆ ಮಾಡಿದರು.
ರೈತರಾದ ಅನಿಲ ಕುಮಾರ ಮೊಹಾರೆ, ಭೀಮನಗೌಡ ಪಾಟೀಲ್, ಸೋಮಣ್ಣ ಕರೂರ, ಎಂ. ಎಲ್. ದೇವರ ಚರ್ಚಾ ಗೋಷ್ಠಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ೫೫ ಕ್ಕೂ ಹೆಚ್ಚು ರೈತ ಭಾಂದವರು ಸದುಪಯೋಗ ಪಡೆದುಕೊಂಡರು.
ಇಂಡಿ ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತ ಮತ್ತು ವಿಜ್ಞಾನಿಗಳ ಸಂವಾದ ಮತ್ತು ಚರ್ಚಾಗೋಷ್ಠಿಯಲ್ಲಿ ಡಾ. ಹೀನಾ ಮಾತನಾಡಿದರು.



















