ಇಂಡಿ:ತಾಲ್ಲೂಕಿನ ನಾದ ಹಾಗೂ ಶಿರಶ್ಯಾಡ ಗ್ರಾಮದ ರೈತರ ಪಹಣಿಯಲ್ಲಿ ವಕ್ಘ್ ಬೋರ್ಡ್ ಹೆಸರು ಇದ್ದು, ಕೂಡಲೇ ತೆಗೆದು ಹಾಕಲು ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ತಾಲ್ಲೂಕು ಘಟಕ ನೂರಾರು ರೈತರು ಸೇರಿ ಶಿರಸ್ತೇದಾರ ಶ್ರೀಕಾಂತ ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು.
ಸೋಮವಾರ ಪಟ್ಟಣದ ತಾಲ್ಲೂಕು ಆಡಳಿತ ಸೌಧಕ್ಕೆ ರೈತರು ಆಗಮಿಸಿ ಮಿನಿ ವಿಧಾನಸೌಧ ಮುಂಬಾಗದಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೆಲ ಹೊತ್ತು ಪ್ರತಿಭಟನೆ ನಡೆಸಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯಕಾರಣ ಸದಸ್ಯ ಗುರುನಾಥ್ ಬಗಲಿ ಮಾತನಾಡಿ, ವಿಜಯಪುರ ಜಿಲ್ಲಾಧಿಕಾರಿಗಳ ಆದೇಶ ಅನ್ವಯ ಸದರಿ ಇಂಡಿ ತಾಲ್ಲೂಕಿನ ನಾದ ಕೆಡಿ ಗ್ರಾಮದ ಸರ್ವೆ ನಂಬರ್ ೧೩೯ ರಿಂದ ೧೪೭ರ ವರೆಗೆ ಹಾಗೂ ಶಿರಶ್ಯಾಡ, ಅರ್ಜುಣಗಿ ಬಿಕೆ, ಕೆಡಿ ಗ್ರಾಮದ ರೈತರ ಪಹಣಿ ಗಳಲ್ಲಿ ಕಾಲಂ ನಂಬರ ೧೧ ರಲ್ಲಿ ಕರ್ನಾಟಕ ವಕ್ಘ್ ಬೋರ್ಡ್ ಹೆಸರು ತೆಗೆದು ಹಾಕಬೇಕು. ನಾದ ಕೆಡಿ ಗ್ರಾಮದಲ್ಲಿರುವ ಜಮಖಂಡಿ ಶುಗರ್ಸ್ ಘಟಕ ೨ರ ಚಿಮಣಿ ಹೋಗೆಯ ಜೊತೆಗೆ ಬೂದಿ ಹಾರುವುದರಿಂದ ನಾದ, ಅರ್ಜುಣಗಿ ಗ್ರಾಮದ ಎಲ್ಲ ರೈತರ ಬೆಳೆಗಳ ಮೇಲೆ ಹಗೂ ತೆರೆದ ಬಾವಿ ಮನೆಗಳ ಮೇಲೆ ಬೂದಿ ಬಿದ್ದು ಪರಿಸರ ಮಾಲಿನ್ಯ ಆಗುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕಾರ್ಖಾನೆಯ ಎಂ.ಡಿ. ಅವರಿಗೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಈರಣ್ಣ ಗೋಟ್ಯಾಳ, ದತ್ತಾತ್ರೇಯ ಡೋಣ , ಮಹಬೂಬಸಾಬ ಮುಲ್ಲಾ, ಈರಣ್ಣ ಬಿರಾದಾರ, ಚನ್ನಪ್ಪ ಮಿರಗಿ, ಶರಣಪ್ಪ ತಾರಾಪೂರ, ಚಂದಪ್ಪ ಮಿರಗಿ ಸೇರಿದಂತೆ ಅನೇಕ ರೈತರು ಇದ್ದರು.