ಸಿಂಧನೂರು : ಸಂವಿಧಾನ ಸಂರಕ್ಷಣಾ ವೇದಿಕೆ ವತಿಯಿಂದ ಸಂವಿಧಾನ ಶಿಲ್ಪಿ, ಭಾರತರತ್ನ, ಡಾ.ಬಿ.ಆರ್.ಅಂಬೇಡ್ಕರ್ ಅವರ 131 ನೇ ಜಯಂತಿ ಅಂಗವಾಗಿ ಕುಷ್ಟಗಿ ತಾಲೂಕಿನಲ್ಲಿ ಸಂವಿಧಾನ ಸಂರಕ್ಷಣಾ ಸಮಾವೇಶವನ್ನು ಏಪ್ರಿಲ್ 24 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸುಖರಾಜ್ ತಾಳಿಕೇರಿ ಹೇಳಿದರು.
ಈ ಸಮಾವೇಶದಲ್ಲಿ ಕೊಪ್ಪಳ-ರಾಯಚೂರು ಜಿಲ್ಲೆಯ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ರೈತ-ಕಾರ್ಮಿಕ ಮಹಿಳೆ, ವಿದ್ಯಾರ್ಥಿ-ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯುಶಸ್ವಿಗೊಳಿಸಬೇಕೆಂದು ಸಮಾವೇಶದ ಆಯೋಜಕರಾದ ಸುಖರಾಜ್ ತಾಳಿಕೇರಿ ಮನವಿ ಮಾಡಿದರು.
ಸಂವಿಧಾನ ಸಂರಕ್ಷಣಾ ಸಮಾವೇಶದಲ್ಲಿ ಭಾಗವಹಿಸುವಂತೆ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯಾದ್ಯಂತ ಜನ ಜಾಗೃತಿ ಕಾರ್ಯಕ್ರಮವನ್ನು ಸಂವಿಧಾನ ಸಂರಕ್ಷಣಾ ವೇದಿಕೆ ಹಮ್ಮಿಕೊಂಡ ಭಾಗವಾಗಿ ನಗರದ ಪ್ರವಾಸಿ ಮಂದಿರದಲ್ಲಿ ಆಗಮಿಸಿ ದಲಿತಪರ, ಹಿಂದುಳಿದ ಅಲ್ಪಸಂಖ್ಯಾತರ ಹಾಗೂ ಪ್ರಗತಿಪರ ಮುಖಂಡರೊಂದಿಗೆ ಸಭೆ ನಡೆಸಿ ಸಮಾವೇಶದ ಕರಪತ್ರ ಹಾಗೂ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಿ ಸಮಾವೇಶವನ್ನು ಯಶಸ್ವಿಗೊಳಿಸಲು ಆಯೋಜಕರಾದ ಟಿ.ರತ್ನಾಕರ್, ಸುಖರಾಜ್ ತಾಳಕೇರಿ, ಶಿವುಪುತ್ರ ಗುಮಗೇರಿ ಕರೆ ನೀಡಿದರು.
ಮುಖಂಡರಾದ ವೆಂಕೋಬ ನಾಯಕ, ಅಲ್ಲಮಪ್ರಭು ಪೂಜಾರ, ಡಾ.ರಾಮಣ್ಣ ಗೋನವಾರ, ನರಸಪ್ಪ ಕಟ್ಟಿಮನಿ, ಎಂ.ಗಂಗಾಧರ, ಹನುಮಂತಪ್ಪ ಗೋಮರ್ಸಿ, ಮಹಾದೇವಪ್ಪ ದುಮುತಿ, ಮರಿಯಪ್ಪ ಸುಕಾಲಪೇಟೆ, ಅಯ್ಯಪ್ಪ ವಕೀಲರು, ಹಂಸರಾಜ್, ದೌಲಸಾಬ ದೊಡ್ಡಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.