ಕಲಬುರಗಿ : ಜಿಲ್ಲೆಯ ಅಫಜಲಪುರ ತಾಲೂಕಿನ ಬಳೂರ್ಗಿ ಹಾಗೂ ಮಹಾರಾಷ್ಟ್ರದ ದುಧನಿ ಮಧ್ಯೆದ ತಿರುವಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ, ಸ್ಥಳದಲ್ಲಿಯೇ ನಾಲ್ವರು ಮಹಿಳೆ ಸೇರಿ, ಒಟ್ಟು ಐವರು ಸಾವನ್ನಪ್ಪಿರುವ ಘಟನೆ ಜರುಗಿದೆ. ಮೃತರು ಅಫಜಲಪುರ ತಾಲೂಕಿನ ದೇವಲಗಾಣಗಾಪುರದಲ್ಲಿ ದತ್ತಾತ್ರೇಯ ದೇವರ ದರ್ಶನ ಮಾಡಿಕೊಂಡು ಮಹಾರಾಷ್ಟ್ರದ ಉಸ್ಮಾನಾಬಾದ್‌ಗೆ ತೆರಳುವಾಗ ಈ ದುರಂತ ಸಂಭವಿಸಿದೆ ಎಂದು ಗೊತ್ತಾಗಿದೆ. ಈ ವೇಳೆ ಮೂವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಕಲಬುರಗಿಯ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. 4 ಹೆಣ್ಣು ಮಕ್ಕಳು, ಓರ್ವ ಚಾಲಕ ಸಾವನ್ನಪ್ಪಿದ್ದು, ಗುರುತು ಪತ್ತೆಗಾಗಿ ಪೊಲೀಸರು ಮಹಾರಾಷ್ಟ್ರ ಪೊಲೀಸರಿಗೆ ಸಂಪರ್ಕ ಸಾಧಿಸಿದ್ದಾರೆ. ಅತಿ ವೇಗದಲ್ಲಿದ್ದ ವಾಹನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದೇ ಅಪಘಾತಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಅಫಜಲಪುರ ಸಿಪಿಐ ಜಗದೇವ ಪಾಳಾ, ಪಿಎಸ್ಐ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ: ಉಮೇಶ್ ಅಚಲೇರಿ
ವೈಸ್ ಆಫ್ ಜನತಾ ಕಲಬುರಗಿ