ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ನ್ಯಾಯ ಮತ್ತು ಧರ್ಮ ಪ್ರಧಾನವೇ ಹೊರತು ಸಂಖ್ಯಾಬಲವಲ್ಲ ಎಂದು ನಿವೃತ್ತ ಪ್ರೌಢ ಶಾಲಾ ಮುಖ್ಯಗುರು ಎಸ್.ಎಚ್.ಮುದ್ನಾಳ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಶಾಲೆಯಲ್ಲಿ ಆಯೋಜಿಸಿರುವ ಕೃಷ್ಣ ಜನ್ಮಾಷ್ಟಮೀ ಸಂಭ್ರಮೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನ ವಹಿಸಿ ಮಾತನಾಡಿದರು. ನ್ಯಾಯ ಮತ್ತು ಧರ್ಮದ ಮಾರ್ಗವನ್ನು ಚಿಕ್ಕವಯಸ್ಸಿನಲ್ಲಿಯೇ ರೂಢಿಸಿಕೊಳ್ಳಬೇಕಾಗಿದೆ. ಧರ್ಮಕ್ಕೆ ಜಯ ಕಟ್ಟಿಟ್ಟ ಬುತ್ತಿ. ಎದೆಗುಂದಿಕೆ ಬೇಡ. ಸ್ಷಷ್ಠ ನಿದರ್ಶನವೆಂದರೆ ಮಹಾಭಾರತವೇ ಸಾಕ್ಷಿ. ದೊಡ್ಡ ಸೈನ್ಯ ಮತ್ತು ಹೆಚ್ಚು ಸಹೋದರರ ಸಂಖ್ಯೆಹೊಂದಿದ್ದ ಅಧರ್ಮ ಮಾರ್ಗದಲ್ಲಿ ಸಾಗಿದ ಕೌರವ ಸಂಪೂರ್ಣ ವಿನಾಶವನ್ನೆ ಕಂಡ. ಕೃಷ್ಣನನ್ನು ನಂಬಿ ಧರ್ಮದ ಆಶ್ರಯದಲ್ಲಿ ಬದುಕಿದ ಪಾಂಡವರು ಜಯವನ್ನೆ ಸಾಧಿಸಿದರು ಎಂದು ಹೇಳಿದರು.
ಪ್ರೌಢ ಶಾಲಾ ಮುಖ್ಯಗುರು ರಾಮಚಂದ್ರ ಹೆಗಡೆ ಮಾತನಾಡಿ ಧರ್ಮದ ಹಾದಿಯಲ್ಲಿ ನಾವು ನಡೆಯುತ್ತಾ ನಮ್ಮ ಮಕ್ಕಳನ್ನು ಅದೆ ರೀತಿ ನಡೆಯುವ ಹಾಗೆ ಮಾಡಬೇಕಾಗಿದೆ. ಮಕ್ಕಳಿಗೆ ಕೃಷ್ಣ ರಾಧೆಯಂತಹ ಛದ್ಮವೇಷ ಹಾಕಿ ಖುಷಿಪಡುವದರೊಂದಿಗೆ ಅವರನ್ನು ಸತ್ಪ್ರಜೆಯನ್ನಾಗಿ ಮಾಡುವ ಕೆಲಸಮಾಡಬೇಕಾಗಿದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಬಿ.ಪಿ.ಕುಲಕರ್ಣಿ ಜನ್ಮಾಷ್ಟಮೀಯ ವೃತ್ತಾಂತದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಪದವಿ ಪ್ರಾಚಾರ್ಯ ಎ.ಕೆ.ಹುನಗುಂದ, ಪ್ರಾಥಮಿಕ ವಿಭಾಗದ ಮುಖ್ಯ ಗುರುಮಾತೆ ಸರಸ್ವತಿ ಮಡಿವಾಳರ, ಆಂಗ್ಲ ಮಾಧ್ಯಮ ವಿಭಾಗದ ಮುಖ್ಯ ಗುರುಮಾತೆ ರಂಜಿತಾ ಭಟ್ಟ, ಪಾಲಕ ವೃಂದದವರು ಸೇರಿದಂತೆ ಇತರರು ಹಾಜರಿದ್ದರು.
ಶಿಕ್ಷಕಿ ಅನ್ನಪೂರ್ಣಾ ನಾಗರಾಳ ಸ್ವಾಗತಿಸಿದರು. ಗೀತ ಗಾಯನ ತಂಡದ ವಿದ್ಯಾರ್ಥಿನಿಯರು ಭಗವದ್ಗೀತೆ ಪಠಿಸಿದರು. ಶಿಕ್ಷಕಿ ತ್ರಿವೇಣಿ ಕುಲಕರ್ಣಿ ಪ್ರಾರ್ಥಿಸಿದರು. ಶಿಕ್ಷಕ ಎಸ್.ಎಸ್.ಹಂಜಗಿ ನಿರೂಪಿಸಿದರು. ರಾಧಾ ಕೋಲಕಾರ ವಂದಿಸಿದರು. ಮಕ್ಕಳು ಕೃಷ್ಣರಾಧೆಯರ ಛದ್ಮ ವೇಷದೊಂದಿಗೆ ಸಾಂಸ್ಕೃತಿಕ ಸಿಂಚನ ನೀಡಿದರು.