ಗ್ರಾಮ ಅಡಳಿತಾಧಿಕಾರಿಗಳು
ಜನಸ್ನೇಹಿಯಾಗಿ, ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕು: ಶಾಸಕ ನಾಡಗೌಡ
ಶಾಸಕರಿಂದ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ಹಸ್ತಾಂತರ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ತಂತ್ರಜ್ಞಾನ ಇಂದಿನ ದಿನಗಳಲ್ಲಿ ಸಾಕಷ್ಟು ಮುಂದುವರಿದಿದೆ. ಇದನ್ನು ಸರಿಯಾಗಿ ಬಳಸಿಕೊಂಡು ಕೆಲಸ ಮಾಡುವ ಮೂಲಕ ಗ್ರಾಮ ಅಡಳಿತಾಧಿಕಾರಿಗಳು
ಜನಸ್ನೇಹಿಯಾಗಿ, ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಿಕೊಡುವ ಮೂಲಕ ಸರ್ಕಾರದ ಉದ್ದೇಶ ಈಡೇರಿಸಬೇಕು ಎಂದು ಶಾಸಕ, ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಹೇಳಿದರು.
ತಾಲೂಕಾಡಳಿತ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸರ್ಕಾರದಿಂದ ಗ್ರಾಮ ಆಡಳಿತಾಧಿಕಾರಿಗಳಿಗೆ ಪೂರೈಕೆಯಾಗಿರುವ ಲ್ಯಾಪ್‌ಟಾಪ್‌ಗಳನ್ನು ಸಾಂಕೇತಿಕವಾಗಿ ವಿತರಿಸುವ ಮತ್ತು ವರ್ಗಾವಣೆಗೊಂಡಿರುವ ತಪಶೀಲ್ದಾರ್ ಬಲರಾಮ ಕಟ್ಟಿಮನಿ ಅವರನ್ನು ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಂದಾಯ ಇಲಾಖೆಯ ಎಲ್ಲ ದಾಖಲೆಗಳನ್ನು ಗಣಕೀಕರಣ ಮಾಡುವ ವ್ಯವಸ್ಥೆ ಯಶಸ್ವಿಯಾಗಿದೆ. ಆದರೂ ಇನ್ನೂ ಕೆಲವು ಸಮಸ್ಯೆಗಳಿವೆ. ಅವುಗಳನ್ನು ಶೀಘ್ರ ಬಗೆಹರಿಸಿ ಸಂಪೂರ್ಣ ವ್ಯವಸ್ಥೆಯನ್ನೇ ಮಾಡಲು ಸರ್ಕಾರ ಕಾರ್ಯೋನ್ಮುಖವಾಗಿದೆ. ಅಧಿಕಾರಿಗಳು ಸಮಸ್ಯೆಗೆ ಶೀಘ್ರ ಪರಿಹಾರ ಕಂಡು ಹಿಡಿದು ಜನಸೇವೆಗೆ ಹೆಚ್ಚಿನ ಒತ್ತು ನೀಡುವುದನ್ನು ಎಂದರು.
ಗಣಕೀಕರಣ ಅಧಿಕಾರಿಗಳಿಂದ ಆಗಬೇಕಿರುವ ಕೆಲಸಕ್ಕಾಗಿ ಜನರು ರಾಜಕಾರಣಿಗಳ ಹತ್ತಿರ ಬರುತ್ತಿದ್ದಾರೆ ಶಾಸಕ, ಸಂಸದ ಯಾರೇ ಆಗಿರಲಿ ಜನಪ್ರತಿನಿಧಿಯಾದವರು ಶಾಸನಗಳನ್ನು ರಚಿಸುವ ಕೆಲಸ ಮಾಡುತ್ತಾರೆ. ಜನರು ಶಾಸಕರ ಹತ್ತಿರ ತಮ್ಮ ಕೆಲಸಕ್ಕಾಗಿ ಅಧಿಕಾರಿಗಳಿಗೆ ಹೇಳುವಂತೆ ಬರುವುದು ಸರಿಯಲ್ಲ ಸಂಬಂಧಿಸಿದ ಅಧಿಕಾರಿಗಳನ್ನೇ ನೇರವಾಗಿ ಸಂಪರ್ಕಿಸಿ ಕೆಲಸ ಮಾಡಿಸಿಕೊಳ್ಳುವುದು ಸರಿಯಾದ ಮಾರ್ಗ ಎಂದರು.
ಇಂದು ಎಲ್ಲ ಅರ್ಜಿಗಳನ್ನು ಆನ್ ಲೈನ್ ಮೂಲಕವೇ – ಹಾಕುವ ವ್ಯವಸ್ಥೆ ಜಾರಿಯಲ್ಲಿದೆ. ತಂತ್ರಜ್ಞಾನ ಬಳಸಿಕೊಂಡು ವ್ಯವಸ್ಥೆಯಲ್ಲಿ ಅಧಿಕಾರಿಗಳು ಶ್ರಮಿಸಬೇಕು. ಜನರಿಗೆ ಹತ್ತಿರವಾಗಿ ಕೆಲಸ ಮಾಡಬೇಕು. ಸಾರ್ವಜನಿಕರು ಕೂಡಾ ಆನ್ ಲೈನ್ ಅರ್ಜಿಯ ವ್ಯವಸ್ಥೆಯನ್ನು ಅರಿತುಕೊಂಡು ಮೊದಲು ಅರ್ಜಿ ಸಲ್ಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇದನ್ನು ಬಿಟ್ಟು ಜನರು ಪತ್ರ ಕೊಡ್ರಿ ಎಂದು ಮುಂಜಾನೆಯಿಂದ ಸಂಜೆವರೆಗೂ ನನ್ನ ಮನೆಗೆ ಬಂದು ಕೂಡುತ್ತಾರೆ. ಜನರು ಕಾನೂನುಗಳನ್ನು ಸರಿಯಾಗಿ ಅರ್ಥೈಸಿಕೊಂಡು ಅದರಂತೆ ನಡೆದುಕೊಳ್ಳಬೇಕು ಎಂದರು.
ಬೇರೆಡೆ ವರ್ಗವಾಗಿರುವ ಇಲ್ಲಿನ ತಹಶೀಲ್ದಾರ್ ಬಲರಾಮ ಕಟ್ಟಿಮನಿ ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಜನರಿಗೆ ಸ್ಪಂದಿಸುವ ಅವರ ಮನೋಭಾವ ಮೆಚ್ಚುವಂಥದ್ದು ಮುಂದೆ ಬರುವ ತಹಶೀಲ್ದಾರ್ ಅವರು ಕೂಡಾ ಜನರಿಗೆ ಹತ್ತಿರವಾಗಿ ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಇದೇ ಸಂದರ್ಭ ಕಟ್ಟಿಮನಿ ಅವರನ್ನು ಬೀಳ್ಕೊಡುವ ಹಿನ್ನೆಲೆ ನಡೆದ ಸಮಾರಂಭದಲ್ಲಿ ತಾಳಿಕೋಟೆ ತಹಶೀಲ್ದಾರ್ ವಿನಯಾ ಹೂಗಾರ, ಮುದ್ದೇಬಿಹಾಳ ಪ್ರಭಾರ ವಹಿಸಿಕೊಂಡ ನಿಡಗುಂದಿ ತಹಶೀಲ್ದಾರ್ ಎ.ಡಿ.ಅಮರಾವಡಗಿ, ಕಂದಾಯ ನಿರೀಕ್ಷಕ ವೆಂಕಟೇಶ ಅಂಬಿಗೇರ ಇನ್ನಿತರರು ಕಟ್ಟಿಮನಿ ಅವರ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಕಟ್ಟಿಮನಿ, 22 ತಿಂಗಳು ಇಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ತೃಪ್ತಿ ಇದೆ. ಯಾವುದೋ ಕಾರಣಕ್ಕಾಗಿ ಕೆಲಸದ ವಿಷಯದಲ್ಲಿ ಸಿಬ್ಬಂದಿ ಮೇಲೆ ಹರಿಹಾಯ್ದಿದ್ದರೂ ಅದನ್ನು ವೈಯುಕ್ತಿಕವಾಗಿ ಭಾವಿಸಬಾರದು. ಸಿಬ್ಬಂದಿ ಸರಿಯಾಗಿ ಕೆಲಸ ಮಾಡಿದರೆ ಮಾತ್ರ ಅಧಿಕಾರಿಗಳೂ ಸರಿಯಾಗಿ ಕೆಲಸ ಮಾಡುತ್ತಾರೆ ಅನ್ನೋದನ್ನು ಅರಿತುಕೊಳ್ಳಬೇಕು. ಬರುವಂಥ ದಿನಗಳಲ್ಲಿ ಆಡಳಿತ ಡಿಜಿಟಲೈಸ್ ಆಗಲಿದ್ದು ಎಲ್ಲರೂ ಅದಕ್ಕೆ ಹೊಂದಿಕೊಂಡು ಕೆಲಸ ಮಾಡಬೇಕು ಎಂದರು.
ಪ್ರಭಾರ ಅಧಿಕಾರ ವಹಿಸಿಕೊಂಡ ನಿಡಗುಂದಿ ತಹಶೀಲ್ದಾರ್ ಎ.ಡಿ.ಅಮರಾವದಗಿ ಮಾತನಾಡಿ, ಸರ್ಕಾರಿ ನೌಕರರಿಗೆ ವರ್ಗಾವಣೆ ಸಹಜ ಪ್ರಕ್ರಿಯೆ, ಕಟ್ಟಿಮನಿ ಅವರ ಬಗ್ಗೆ ಸಿಬ್ಬಂದಿ ಇಟ್ಟುಕೊಂಡಿರುವ ಅಭಿಮಾನ ಮೆಚ್ಚುವಂಥದ್ದು ಕಂದಾಯ ಇಲಾಖೆಯ ಎಲ್ಲ ಸಿಬ್ಬಂದಿ ಸರ್ಕಾರದ ಕೆಲಸಗಳನ್ನು ಸಾರ್ವಜನಿಕರಿಗೆ ವಿಳಂಬ ಇಲ್ಲದೆ ಮಾಡಿಕೊಡುವ ಪದ್ಧತಿ ಪಾಲಿಸಿದರೆ ಆಡಳಿತ ಸುಲಭವಾಗುತ್ತದೆ ಎಂದರು.
ಇದೇ ವೇಳೆ ತಹಶೀಲ್ದಾರ್ ಬಲರಾಮ ಕಟ್ಟಿಮನಿ ಅವರನ್ನು ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ ಸನ್ಮಾನಿಸಿ ಬೀಳ್ಕೊಟ್ಟರು. ಪ್ರಭಾರ ವಹಿಸಿಕೊಂಡ ತಹಶಿಲ್ದಾರ ಎ.ಡಿ.ಅಮರಾವದಗಿ ಅವರನ್ನು ಸನ್ಮಾನಿಸಿ ಸ್ವಾಗತಿಸಿಕೊಂಡರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಆಡಳಿತಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಜೂಲಗುಡ್ಡ ತಾಲೂಕಾಧ್ಯಕ್ಷ ಮನೋಜ್ ರಾಠೋಡ, ಪ್ರಧಾನ ಕಾರ್ಯದರ್ಶಿ ರಿಯಾಜ್ ನಾಯೋಡಿ, ಕಂದಾಯ ನೌಕರರ ಸಂಘದ ತಾಲೂಕಾಧ್ಯಕ್ಷ ಶ್ರೀನಿವಾಸ ಹುನಗುಂದ, ಉಪ ತಹಶೀಲ್ದಾರ್ ಗಳಾದ ಆರ್.ಬಿ.ಬಾಗೇವಾಡಿ, ಎನ್.ಬಿ.ದೊರೆ, ಶಕುಂತಲಾ ಸಜ್ಜನ, ಮಹೇಶ ಗೋನಾಳ, ಕಂದಾಯ ನಿರೀಕ್ಷಕರಾದ ಡಿ.ಎಸ್.ತಳವಾರ, ಬಸನಗೌಡ ಪಾಟೀಲ, ಗ್ರಾಮ ಆಡಳಿತಾಧಿಕಾರಿಗಳು, ತಹಶೀಲ್ದಾರ್ ಕಚೇರಿ ಸಿಬ್ಬಂದಿಗಳು ಸೇರಿದಂತೆ ಉಪಸ್ಥಿತರಿದ್ದರು.
ಶಾಸಕರಾದ ನಾವು ಫಲಿಸಿಟೇಟರ್ಸ್ ( ಅನುಕೂಲಕಲ್ಪಿಸಿಕೊಡುವವರು) ಅಲ್ಲ ಕೆಲಸ ಆಗಬೇಕಾದ ಇಲಾಖೆಗೆ ಜನರು ಹೋಗಿ ಕೆಲಸ ಮಾಡಿಸಿಕೊಳ್ಳಬೇಕು. ಆದರೆ ರಾಜಕೀಯವಾಗಿ ಹೇಳಿಸಿಕೆಲಸ ಮಾಡಿಸಿಕೊಳ್ಳುವುದು ಸರಿಯಲ್ಲ ಇದು ಕೆಲಸ ಮಾಡುವ ಅಧಿಕಾರಿಗಳಿಗೂ ನೋವು, ಬೇಸರ ಉಂಟು ಮಾಡುತ್ತದೆ. ಜನರು ಮೊದಲು ಅಧಿಕಾರಿ ಸಂಪರ್ಕಿಸಿ ಕೆಲಸ ಮಾಡಿಕೊಡದಿದ್ದರೆ ಆನಂತರ ನಮ್ಮ ಹತ್ತಿರ ಬರಬೇಕು.
ಸಿ.ಎಸ್.ನಾಡಗೌಡ, ಶಾಸಕರು ಮುದ್ದೇಬಿಹಾಳ