ಸಿಂಧನೂರು: ಶ್ರಮಜೀವಿ ಹಮಾಲರ ಸಂಘದಿಂದ ಕಾರ್ಮಿಕ ದಿನಾಚರಣೆಯನ್ನು ಶ್ರಮಿಕ ಭವನದಲ್ಲಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಾಬುಸಾಬ ಬೆಳ್ಳಟ್ಟಿ ದ್ವಜಾರೋಹಣ ನೇರವೇರಿಸಿದರು. ನಂತರ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷರಾದ ಡಿ.ಹೆಚ್. ಪೂಜಾರ್ ಮಾತನಾಡಿ, ಅಮೇರಿಕಾದ ಚಿಕಾಗೋ ನಗರದಲ್ಲಿ ಮಹಿಳಾ ಕಾರ್ಮಿಕರು ತಮ್ಮ ರಕ್ತದಲ್ಲಿ ಅದ್ದಿ ತೆಗೆದ ತ್ಯಾಗದ ಸಂಕೇತವೇ ಇಂದಿನ ಮೇ ದಿನಾವರಣೆಯಾಗಿದೆ ಎಂದರು.
ಪ್ರಗತಿಪರ ಮುಖಂಡರಾದ, ಹೆಚ್.ಎನ್.ಬಡಿಗೇರ್, ಮಾತನಾಡಿ, ಸಮಾಜದ ಅಸಮಾನತೆಗೆ ಆಳುವ ವರ್ಗದ ಸರಕಾರಗಳು ಕಂಟಕಪ್ರಾಯವಾಗಿವೆ. ಮುಂದಿನ ದಿನಮಾನಗಳಲ್ಲಿ ರೈತ-ಕಾರ್ಮಿಕರೊಡಗೂಡಿ ಬಲಾಢ್ಯ ಚಳುವಳಿಯನ್ನು ಕಟ್ಟಬೇಕಾಗಿದೆ. ಕಾರ್ಮಿಕರ ತಮ್ಮ ಹಕ್ಕುಗಳಿಗಾಗಿ ನಿರಂತರ ಹೋರಾಟ ಅಗತ್ಯವೆಂದು ಕರೆ ನೀಡಿದರು.
ದಲಿತ ಹಿಂದುಳಿದ ಅಲ್ಪಸಂಖ್ಯಾತ ಪ್ರಗತಿಪರ ಒಕ್ಕೂಟದ ಪ್ರಧಾನ ಸಂಚಾಲಕರಾದ ಜೆ.ರಾಯಪ್ಪ ವಕೀಲರು ಮಾತನಾಡಿ, ತ್ಯಾಗಬಲಿದಾನಗಳ ಮೂಲಕ ಪಡೆದ ಕಾರ್ಮಿಕರ ಕಾನೂನುಗಳು ಇಂದು ಈ ಸರಕಾರಗಳಿಂದ ಹರಣವಾಗುತ್ತಿವೆ. ಕಾರ್ಮಿಕರು ಮರಳಿ ತಮ್ಮ ಕಾನೂನುಗಳು ಪಡೆಯಲಿಕ್ಕೆ ಪುನಃ ಚಳುವಳಿಯ ದಾರಿ ಹಿಡಿಯಬೇಕೆಂದು ಕರೆ ನೀಡಿದರು. ಶ್ರಮಜೀವಿ ಹಮಾಲರ ಸಂಘದ ಗೌರವಾಧ್ಯಕ್ಷ ಎಂ.ಗಂಗಾಧರ ಕಾರ್ಮಿಕ ದಿನಾಚರಣೆ ಕುರಿತು ಮಾತನಾಡಿದರು. ಸಂಘದ ಕಾರ್ಯದರ್ಶಿ ಹೆಚ್.ಆರ್. ಹೊಸಮನಿ, ನಾಗಪ್ಪ ಉಮಲೂಟಿ, ತಿಮ್ಮಣ್ಣ ಯಾದವ್ ಯಲ್ಲಪ್ಪ ಗೋಮರ್ಸಿ, ಮುದಿಯಪ್ಪ, ಪರಸಪ್ಪ, ಬಸವರಾಜ, ಮಹಿಳಾ ಕಾರ್ಮಿಕರು ಸೇರಿದಂತೆ ಅನೇಕ ಹಮಾಲಿ ಕಾರ್ಮಿಕರು ಭಾಗವಹಿಸಿದ್ದರು.