ಕಥೆಗಳಲ್ಲಿ ಮೆಟ್ರೊ ಜಗತ್ತು ಅನಾವರಣವಾಗುವ
ಹೊತ್ತಲ್ಲಿ ದೇಸೀಯ ಶೈಲಿ ಮಾಯಾವಾಗುತ್ತಿದೆ.
ಇಂಡಿ: ಗ್ರಾಮೀಣ ಕಥಗಳು ನಮ್ಮ ಬದುಕಿನ ಕಥೆಗಳೇ
ಆಗಿವೆ, ಅಲ್ಲಿ ನಮ್ಮ ದೇಸಿಯ ಸೊಗಡು ಇತ್ತೀಚೆಗಿನ ದಿನಗಳಲ್ಲಿ ಮರೆಯಾಗುತ್ತಿರುವುದು ವಿಪರ್ಯಾಸದ
ಸಂಗತಿಯಾಗಿದೆ ಎಂದು ಬೆಳಗಾವಿ ಜಿಲ್ಲೆಯ ಯಕ್ಕುಂಡಿ
ಸರಕಾರಿ ಪದವಿಪೂರ್ವ ಕಾಲೇಜಿ ಪ್ರಾಚಾರ್ಯ ಡಾ.
ವೈ.ಎಂ.ಯಾಕೊಳ್ಳಿ ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ
ವಿಭಾಗ ಹಾಗೂ ಕಡಣಿಯ ಬೆರಗು ಪ್ರಕಾಶನ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ. ಪ್ರಕಾಶ ಗ. ಖಾಡೆ ಅವರ ಬಾಳುಕುನ ಪುರಾಣ ಕಥಾ ಓದು ಮತ್ತು ಸಂವಾದ ಕಾರ್ಯಕ್ರಮದಲ್ಲಿ ಬಾಳುಕುನ ಪುರಾಣ ಕತಾವಲೋಕನ ಕುರಿತು ಉಪನ್ಯಾಸ ನೀಡಿದರು.
ಇಂದಿನ ಕನ್ನಡದ ಕತೆಗಳಲ್ಲಿ ಮೆಟ್ರೊ ಜಗತ್ತು
ಅನಾವರಣವಾಗುತ್ತಿರುವ ಈ ಹೊತ್ತಲ್ಲಿ ಬಾಳುಕುನ
ಪುರಾಣದ ಮೂಲಕ ಕತೆಗಾರ ಗ್ರಾಮೀಣ ಪ್ರದೇಶದ
ಜನರ ಜೀವನಶೈಲಿಗಳನ್ನು ಜಾನಪದೀಯ ಶೈಲಿಯಲ್ಲಿ
ಹಿಡಿದಿಡುವ ಕಾರ್ಯ ಮೆಚ್ಚುಗೆ ಪಡುವಂತಹದ್ದು,
ಕತೆಗಾರರು ಇಂತಹ ಸಂಗತಿಗಳನ್ನು ಬಹಳ
ಸೂಕ್ಷ್ಮವಾಗಿ ಓದುಗರಿಗೆ ಕಟ್ಟಿಕೊಡುವ ಕೆಲಸ
ಮಾಡಬೇಕು ಎಂದು ಆಶಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ
ಮುಖ್ಯಸ್ಥ ಡಾ: ರಮೇಶ ಕತ್ತಿ ಮಾತನಾಡಿ ಪ್ರಕಾಶ ಖಾಡೆ
ಈ ನೆಲದ ಸತ್ವಯುತ ಬರಹಗಾರ, ಅವರ ಕತೆಗಳಲ್ಲಿ
ಜಾನಪದೀಯ ಸೊಬಗು ಹೆಚ್ಚು ವಿಸ್ತಾರವನ್ನು ಪಡೆದಿದೆ,
ಖಾಡೆ ಅವರು ಮಹತ್ವದ ಕತೆಗಾರರ ಸಾಲಿನಲ್ಲಿ
ನಿಲ್ಲುತ್ತಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ
ಪ್ರಾಚಾರ್ಯ ಆರ್.ಎಚ್.ರಮೇಶ ವಹಿಸಿಕೊಂಡು ಮಾತನಾಡಿ, ಇಂತಹ ಕಾರ್ಯಕ್ರಮಗಳು ನಮ್ಮಲ್ಲಿ
ಸಾಹಿತ್ಯಾಸಕ್ತಿಯನ್ನು ಮೂಡಿಸುವದಲ್ಲದೆ ನಮಗೂ
ಬರಹದ ಪ್ರೇರಣೆಯಾಗಿದೆ ಇಂತಹ ಉಪಯುಕ್ತ
ಕಾರ್ಯಕ್ರಮಗಳು ನಡೆಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಐಕ್ಯೂಐಸಿ ಸಂಯೋಜಕಿ ಡಾ.
ಶೀರುನುಸಲ್ತಾನ ಇನಾಮದಾರ, ಪ್ರೊ.ತಿಪ್ಪಣ್ಣ. ಎಸ್.ವಗ್ದಾಳ, ಪ್ರೊ ರಾಜಲಕ್ಷ್ಮಿ ಆರ್, ಸತೀಶಕುಮಾರ ಚುಂಚೂರ, ಪ್ರೊ.ಎಸ್.ಜೆ.ಮಾಡ್ಯಾಳ, ಸೋಮಲಿಂಗ ಎಸ್ ಗಂಜಿ ಮೊದಲಾದವರು ವೇದಿಕೆಯಲ್ಲಿದ್ದರು.
ಗಮನ ಸೆಳೆದ ಕತೆಗಾರರೊಂದಿಗೆ ಸಂವಾದ: ಕತೆಗಳ ವಸ್ತು, ರಚನೆಯ ಹಿನ್ನಲೆ, ಭಾಷೆಶೈಲಿಯ ಕುರಿತಾಗಿ ವಿದ್ಯಾರ್ಥಿಗಳು ಕತೆಗಾರರೊಂದಿಗೆ ಸಂವಾದ ಮಾಡಿದರು. ಕಾಲೇಜಿನ ಆಯ್ದ 50 ವಿದ್ಯಾರ್ಥಿಗಳು ಕತೆಗಾರ ಡಾ. ಪ್ರಕಾಶ ಗ.ಖಾಡೆ ಅವರೊಂದಿಗೆ ನಡೆದ ಸಂವಾದ ಕತಾಲೋಕದ ಹೊಸ ವಿಷಯಗಳನ್ನು ಕಲಿಯಲು ಪ್ರೇರಣೆ ನೀಡಿತು ಎಂದು ವಿದ್ಯಾರ್ಥಿನಿ ಐಶ್ವರ್ಯ ನಾದ ಹೇಳಿದರು. ಕತೆ ಕಟ್ಟುವ ವಿಧಾನ, ಭಾಷಾ ಶೈಲಿ ಇತ್ಯಾದಿ ವಿಷಯಗಳನ್ನು ಕುಮಾರಿ ಸ್ನೇಹಾ, ಕು.ಬಸವರಾಜ ಪೂಜಾರಿ ಮೊದಲಾದ ವಿದ್ಯಾರ್ಥಿಗಳು ಕಥೆಗಾರೊಂದಿಗೆ ಸಂವಾದ ನಡೆಸಿದರು.
ಇಂಡಿ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ ಹಾಗೂ ಕಡಣಿಯ ಬೆರಗು ಪ್ರಕಾಶನ
ಸಂಸ್ಥೆಯ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ. ಪ್ರಕಾಶ ಗ. ಖಾಡೆ ಅವರ ಬಾಳುಕುನ ಪುರಾಣ ಕಥಾ ಓದು ಮತ್ತು ಸಂವಾದ ಕಾರ್ಯಕ್ರಮದಲ್ಲಿ ಕತೆಗಾರ ಡಾ. ವೈ.ಎಂ.ಯಾಕೊಳ್ಳಿ ಮಾತನಾಡಿದರು.
ಇಂಡಿ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ ಹಾಗೂ ಕಡಣಿಯ ಬೆರಗು ಪ್ರಕಾಶನ
ಸಂಸ್ಥೆಯ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ. ಪ್ರಕಾಶ ಗ.ಖಾಡೆ ಅವರ ಬಾಳುಕುನ ಪುರಾಣ ಕಥಾ ಓದು ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು.