ಎಸಿ ಅಬೀದ್ ಭೇಟಿ ಪರಿಶೀಲನೆ : ಪಟ್ಟಣದ ಕೊಳಚೇ ಪ್ರದೇಶಗಳ ನಿರ್ಮೂಲನೆಗೆ ಸಂಕಲ್ಪ..!
ಇಂಡಿ : ಪಟ್ಟಣದಲ್ಲಿ ಅಲ್ಲಲ್ಲಿ ಕೊಳಚೆ ಪ್ರದೇಶಗಳಿವೆ, ಅವುಗಳನ್ನು ಸ್ವಚ್ಚಗೊಳಿಸುವದು ಮತ್ತು ಕಾಯಿಪಲ್ಲೆ, ಹಣ್ಣು ಮಾರುಕಟ್ಟೆಯನ್ನು ಮೆಗಾ ಮಾರುಕಟ್ಟೆಯ ಕೆಳಗಡೆ ಆಯೋಜಿಸಲು ಯೋಜನೆಯೊಂದನ್ನು ರೂಪಿಸಲಾಗುವದು ಎಂದು ಎಸಿ ಅಬೀದ್ ಗದ್ಯಾಳ ಮತ್ತು ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಜಂಟಿಯಾಗಿ ಹೇಳಿದರು.
ಅವರು ಬುಧವಾರ ಪಟ್ಟಣದಲ್ಲಿ ಹೊಸದಾಗಿ ನಿರ್ಮಿಸಿದ ಮೆಗಾ ಮಾರುಕಟ್ಟೆಗೆ ಮತ್ತು ಅದರ ಪಕ್ಕದಲ್ಲಿಯ ಕೊಳಚೇ ಪ್ರದೇಶಕ್ಕೆ ಭೇಟಿ ನೀಡಿ ಪರಿಸೀಲಿಸಿ ಮಾತನಾಡಿದರು.
ಮೆಗಾ ಮಾರುಕಟ್ಟೆಯ ಎದುರಿಗೆ (ಇಂಡಿ ಬಸ್ ನಿಲ್ದಾಣದಿಂದ ಸ್ಟೇಶನ್ ರಸ್ತೆಗೆ) ಇರುವ ಮುಖ್ಯ ರಸ್ತೆಗೆ ಮಾರ್ಗ ಕಲ್ಪಿಸಿಕೊಟ್ಟು ಮಾರುಕಟ್ಟೆಯ ಕೆಳಗಡೆ ನಿರ್ಮಿಸಲು ಉದ್ದೇಶಿಸಿರುವ ಕಾಯಿಪಲ್ಲೆ, ಹಣ್ಣು ಮಾರುಕಟ್ಟೆಗೆ ಹೋಗಿಬರಲು ಮೆಗಾ ಮಾರುಕಟ್ಟೆಗೆ ಇನ್ನೂ ಮೂರು ಕಡೆ ಹೆಬ್ಬಾಗಿಲು ನಿರ್ಮಿಸುವದು, ವಾಹನಗಳ ನಿಲುಗಡೆಗೆ ವ್ಯವಸ್ಥೆ, ಕೊಳಚೆ ಪ್ರದೇಶ ಸ್ವಚ್ಚಗೊಳಿಸುವದು, ಹಳೆಯ ಸರಕಾರಿ ಆಸ್ಪತ್ರೆಯಲ್ಲಿರುವ ಹಳೆಯ ಕಟ್ಟಡಗಳನ್ನು ನೆಲಸಮಗೊಳಿಸಿ ಮೆಗಾ ಮಾರುಕಟ್ಟೆಗೆ ಕಂಪೌAಡ ಗೋಡೆ ನಿರ್ಮಿಸುವದು, ಕುಡಿಯುವ ನೀರಿನ ವ್ಯವಸ್ಥೆ ಮುಂತಾದ ಕೆಲಸಗಳನ್ನು ಶೀಘ್ರದಲ್ಲಿಯೇ ಮಾಡಲಾಗುವದು ಎಂದರು.
ಈ ವ್ಯವಸ್ಥೆಯಿಂದ ಇಂಡಿ-ಸಿಂದಗಿ, ಇಂಡಿ- ವಿಜಯಪೂರ ರಸ್ತೆ, ಇಂಡಿ- ಅಗರಖೇಡ ರಸ್ತೆ ಮತ್ತು ಇಂಡಿ-ಸ್ಟೇಶನ್ ರಸ್ತೆಗಳಲ್ಲಿ ಇನ್ನು ಮುಂದೆ ಯಾವದೇ ಒತ್ತುವ ಗಾಡಿಗಳಲ್ಲಿ, ಪಾದಚಾರಿ ಮಾರ್ಗಗಳಲ್ಲಿ, ರಸ್ತೆಯ ಮೇಲೆ ಯಾವದೇ ಕಾಯಿಪಲ್ಲೆ, ಹಣ್ಣು ಮತ್ತು ಇತರೇ ವಸ್ತುಗಳನ್ನು ಮಾರಾಟ ಮಾಡುವ ಪ್ರಶ್ನೆ ಬರುವದಿಲ್ಲ. ಇಂಡಿ ನಾಗರಿಕರಿಗೆ ಕಾಯಿಪಲ್ಲೆ, ಹಣ್ಣು ಒಂದೇ ಕಡೆ ಸಿಗುವಂತಾಗುತ್ತದೆ. ಅಲ್ಲದೇ ಮೆಗಾ ಮಾರುಕಟ್ಟೆಯೂ ಕೂಡಾ ಇಲ್ಲೇ ಇರುವದರಿಂದ ಎಲ್ಲಾ ವ್ಯಾಪಾರ ವ್ಯವಹಾರ ಇಲ್ಲಿಯೇ ನಡೆಯುತ್ತದೆ. ಹೆಚ್ಚಿನ ಜನ ಇಲ್ಲಿಗೆ ಬಂದುಹೋಗಲು ಅಗತ್ಯವಿರುವ ಸೌಲಭ್ಯಗಳನ್ನು ಮಾಡಿಕೊಡಲಾಗುವದು ಎಂದರು.
ಪಟ್ಟಣದ ಎಲ್ಲಾ ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸಿ, ಪಾದಚಾರಿಗಳಿಗೆ, ವಾಹನ ಸವಾರರಿಗೆ ಮುಕ್ತವಾದ ಅವಕಾಶ ಕಲ್ಪಿಸಿಕೊಡುವದಲ್ಲದೇ ಸುಂದರ ನಗರವನ್ನಾಗಿ ಮಾಡಲು ಪ್ರಯತ್ನಿಸಲಾಗುವದು. ಪಟ್ಟಣದ ಪ್ರತಿ ಸರ್ಕಲ್ ನಲ್ಲಿ ಸಿಗ್ನಲ್ ವ್ಯವಸ್ಥೆ, ನಾಲ್ಕು ಚಕ್ರಗಳ ವಾಹನಗಳಿಗೆ ನಿಲುಗಡೆಯ ವ್ಯವಸ್ಥೆ ಕಲ್ಪಿಸಿಕೊಡಲಾಗುವದು. ಈ ಎಲ್ಲಾ ಕೆಲಸಗಳ ಬಗ್ಗೆ ಯೋಜನೆಯೊಂದನ್ನು ರೂಪಿಸಲಾಗಿದೆ. ಈ ಯೋಜನೆಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಇಂಡಿ ಪಟ್ಟಣದ ಮೆಗಾ ಮಾರುಕಟ್ಟೆಯ ಪಕ್ಕದಲ್ಲಿರುವ ಕೊಳಚೆ ಪ್ರದೇಶಕ್ಕೆ ಎಸಿ ಅಬೀದ್ ಗದ್ಯಾಳ ಮತ್ತು ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.