ಇಂಡಿ : ಬರದ ನಾಡಿನಲ್ಲಿ ನೀರಿನ ಹಾಹಾಕಾರ ಪ್ರತಿ ವರ್ಷವೂ ಉಲ್ಬಣಗೊಳ್ಳೊದು ಸಹಜವಾಗಿದೆ. ಬಹುತೇಕವಾಗಿ ತಾಲೂಕಿನ ಕೆಲವು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವಂತಹ ಪರಿಸ್ಥಿತಿ ಯಾವಾಗಲೂ ಕಾಣುತ್ತದೆ. ಜೊತೆಗೆ ಜನ ಜಾನುವಾರುಗಳಿಗೆ ನೀರಿನ ಸಮಸ್ಯೆ ಹಾಹಾಕಾರವಾಗಿ ಪ್ರತಿ ವರ್ಷವೂ ಕಾಡುತ್ತಿದೆ. ಈ ಬಗ್ಗೆ ಸರಕಾರ ಕೈಗೊಂಡಿರುವ ತಾಲ್ಲೂಕಿನ 16 ಸಣ್ಣ ನೀರಾವರಿ ಕೆರೆಗಳನ್ನು ತುಂಬುವ ಯೋಜನೆ ಬಗ್ಗೆ ವಿಧಾನ ಸೌಧದಲ್ಲಿ ಚುಕ್ಕೆ ಗುರುತಿನ ಪ್ರಶ್ನೆಯ ಮೂಲಕ ಶಾಸಕ ಯಶವಂತರಾಯಗೌಡ ಪಾಟೀಲ್ ಸರಕಾರದ ಗಮನ ಸೆಳೆಯದರು. ಯೋಜನೆಯ ರೂಪರೇಷ, ಟೆಂಡರ್ ಕಾಮಗಾರಿ, ಆಡಳಿತಾತ್ಮಕ ಅನುಮೋದನೆ ಮತ್ತು ಸದರಿ ಕಾಮಗಾರಿ ತುರ್ತಾಗಿ ಕೈಗೊಳ್ಳಲು ಸರಕಾರ ತೆಗೆದುಕೊಂಡು ಕ್ರಮಗಳ ಬಗ್ಗೆ ವಿಧಾನ ಸೌಧದಲ್ಲಿ ಕೆರೆ ತುಂಬುವ ವಿಷಯದ ಮೇಲೆ ಬೆಳಕು ಚೆಲ್ಲಿದರು.
ಇಂಡಿ ತಾಲ್ಲೂಕಿನ ೧೬ ಸಣ್ಣ ನೀರಾವರಿ ಕೆರೆಗಳನ್ನು ತಿಡಗುಂದಿ ಶಾಖಾ ಕಾಲುವೆಯಿಂದ ಗುರುತ್ವ ಮೂಲಕ ನೀರು ತುಂಬುವ ಕೆರೆಗಳ ವಿವರ ಇಂತಿದೆ.
ದೇಗಿನಾಳ, ಹಳಗುಣಕಿ, ಬಬಲಾದ, ಕೂಡಗಿ, ಗುಂದವಾನ, ಕೂಡಗಿ-೧, ಕೂಡಗಿ-೨ ಕೋಳುರಗಿ, ಸೋನಕನಹಳ್ಳಿ, ನಂದರಗಿ, ಶಿಗಣಾಪುರ, ಸಾತಲಗಾಂವ, ಸಾವಳಸಂಗ, ಜಿಗಜಿವಣಿ, ಇಂಚಗೇರಿ -೧ ,ಇಂಚಗೇರಿ -೨ ಮತ್ತು ಹೊರ್ತಿ.
ಈ ಸಂದರ್ಭದಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು, ಮುಳವಾಡ ಏತ ನೀರಾವರಿ ಯೋಜನೆ ಹಂತ-3 ರಡಿ ಬರುವ ತಿಡಗುಂದಿ ಶಾಖಾ ಕಾಲುವೆಯ ಮೂಲಕ ನೀರು ತುಂಬುವ 149.00 ಕೋಟಿ ಅಂದಾಜು ಮೊತ್ತದ ಕೈಗೆತ್ತಿಕೊಳ್ಳಲು ಸರ್ಕಾರ ಅನುಮೋದನೆ ನೀಡಿದೆ ಎಂದು ಹೇಳಿದರು. ಕಾಮಗಾರಿಯನ್ನು ಮುಳವಾಡ ಏತ ನೀರಾವರಿ ಹಂತ-3 ರ ಡಿಯ ತಿಡಗುಂದಿ ಶಾಖಾ ಕಾಲುವೆ ಕಿ.ಮೀ. 50.88 ರಲ್ಲಿ ಆಫ್‌ಟೇಕ್‌ನಲ್ಲಿ 1.40 ಕ್ಯೂಸೆಕ್ಸ್ ನೀರನ್ನು ಉಪಯೋಗಿಸಿಕೊಂಡು ಇಂಡಿ ತಾಲ್ಲೂಕಿನ 16 ಕೆರೆ ತುಂಬಿಸಲು ಯೋಜನೆ ರೂಪಿಸಲಾಗಿದೆ. ಜಲ ಸಂಪನ್ಮೂಲ ಇಲಾಖೆಯ 4 ನಿಗಮಗಳಿಗೆ ಸಂಬಂಧಿಸಿದಂತೆ ಅಂದಾಜು ಪರಿಶೀಲನಾ ಸಮಿತಿಗಳನ್ನು (ಇ.ಆರ್.ಸಿ) ಪುನರ್ ರಚಿಸಿ ಆದೇಶ ಹೊರಡಿಸಿದೆ. ಸದರಿ ಪುನರ್ ರಚಿಸಲಾದ ಇ.ಆರ್.ಸಿ. ಸಮಿತಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಅಧ್ಯಕ್ಷರಾಗಿದ್ದು, ಸಮಿತಿಯ ಸದಸ್ಯರುಗಳಾಗಿ ನಿವೃತ್ತ ಮುಖ್ಯ ಇಂಜಿನಿಯರ್‌ಗಳು ಹಾಗೂ ವಿಶೇಷ ಆಹ್ವಾನಿತರನ್ನು ಒಳಗೊಂಡಿದೆ ಎಂದರು.
ಇಂಡಿ ತಾಲ್ಲೂಕಿನ 16 ಸಣ್ಣ ನೀರಾವರಿ ಕೆರೆಗಳನ್ನು ತುಂಬುವ ಯೋಜನಾ ಕಾಮಗಾರಿಯ ಅಂದಾಜು ಪ್ರಸ್ತಾವನೆಯು ಕೃಷ್ಣಾ ಭಾಗ್ಯ ಜಲ ನಿಗಮದ ತಾಂತ್ರಿಕ ಪರಿಶೀಲನೆ ಹಂತದಲ್ಲಿದ್ದು, ನಿಗಮದ ಅಂದಾಜು ಪರಿಶೀಲನಾ ಸಮಿತಿಯಲ್ಲಿ ಮಂಡಿಸಿ, ಸಕ್ಷಮ ಪ್ರಾಧಿಕಾರದಿಂದ ಅಗತ್ಯ ತಿರುವಳಿ ಪಡೆದು ಟೆಂಡರ್
ಕರೆಯಲು ಕ್ರಮ ಜರುಗಿಸಲಾಗುವುದು ಎಂದರು.