ವಿದ್ಯಾರ್ಥಿಗಳೊಂದಿಗೆ ಬ್ಯಾಡ್ಮಿಂಟನ್ ಆಟ ಆಡಿದ ಸಿಇಓ ಆನಂದ
ವಿಜಯಪುರ : ಓದಿನೊಂದಿಗೆ ಪಠ್ಯೇತರ ಚಟುವಟಿಕೆಯೂ ಮುಖ್ಯವಾಗಿದೆ. ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಿಷಿ ಆನಂದ ಅವರು ಹೇಳಿದರು. ಅವರು, ಹಿಟ್ಟಿನಹಳ್ಳಿ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಳೊಂದಿಗೆ ಸಂವಾದ ನಡೆಸಿದರು. ಅಂತರಾಷ್ಟ್ರೀಯ ಕ್ರೀಡಾ ದಿನ ಅಂಗವಾಗಿ ವಿಜಯಪುರ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಗ್ರಂಥಾಲಯ, ಸರಕಾರಿ ಶಾಲೆ ಹಾಗೂ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಪಾಠದೊಂದಿಗೆ ಕ್ರೀಡೆಗಳಾದ ಚೆಸ್, ಕೇರಂ, ಬ್ಯಾಡ್ಮಿಂಟನ್, ವ್ಹಾಲಿಬಾಲ್, ಥ್ರೊಬಾಲ್, ಕಬಡ್ಡಿ, ಖೋ ಖೋ ಹಾಗೂ ಇತರೆ ಆಟಗಳನ್ನು ಪ್ರತಿನಿತ್ಯ ರೂಢಿಸಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ಕಾಯ್ದುಕೊಳ್ಳಬಹುದು. ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಆಟೋಟಗಳಲ್ಲಿ ಪಾಲ್ಗೊಳ್ಳಬೇಕು. ಶಾಲಾ ಮಕ್ಕಳು ಮೊಬೈಲ್ ಬಳಕೆಯಿಂದ ದೂರವಿರಬೇಕು. ಓದಿನೊಂದಿಗೆ ಆಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು, ಇದರಿಂದ ನಾಯಕತ್ವ ಗುಣ, ಕ್ರೀಡಾ ಮನೋಭಾವ ಬೆಳೆಯುತ್ತದೆ ಎಂದು ಮಕ್ಕಳಿಗೆ ಸಲಹೆ ನೀಡಿದರು.
ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ಬ್ಯಾಡ್ಮಿಂಟನ್ ಆಟ ಆಡಿ ಮಕ್ಕಳನ್ನು ಹುರಿದುಂಬಿಸಿದರು. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಶಾಲಾ ಆಟದ ಮೈದಾನ ಅಭಿವೃದ್ಧಿ ಮಾಡಲಾಗಿರುವ ಕಾಮಗಾರಿಯನ್ನು ವೀಕ್ಷಿಸಿದರು.ಹಿಟ್ಟಿನಹಳ್ಳಿ ಗ್ರಾಮದ ಸರಕಾರಿ ಗ್ರಂಥಾಲಯಕ್ಕೆ ಭೇಟಿ ನೀಡಿ, ಅಲ್ಲಿನ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕುರಿತು ಪರಿಶೀಲಿಸಿದರು. ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಓದಿಗೆ ಅನುಕೂಲ ಕಲ್ಪಿಸಿರುವ ಪುಸ್ತಕಗಳೊಂದಿಗೆ ಸ್ಪರ್ಧಾತ್ಮಕ, ಸ್ಪೋಕನ್ ಇಂಗ್ಲೀಷ್ ಪುಸ್ತಕಗಳು ಒದಗಿಸಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು. ಗ್ರಂಥಾಲಯದಲ್ಲಿ ಸ್ಮಾರ್ಟ್ ಟಿ.ವ್ಹಿ, ಇ-ಮೊಬೈಲ್ ವ್ಯವಸ್ಥೆ, ಓದಲು ಪ್ರತ್ಯೇಕ ಸ್ಥಳದ ವ್ಯವಸ್ಥೆಗಳನ್ನು ವೀಕ್ಷಿಸಿದರು. ಶಾಲಾ ಅವಧಿಯ ನಂತರ ಗ್ರಂಥಾಲಯಕ್ಕೆ ಭೇಟಿ ನೀಡಿ ಪಠ್ಯ ಚಟುವಟಿಕೆಗಳಲ್ಲಿ ತೊಡಗಬೇಕು. ಉತ್ತಮ ಸಾಧನೆ ಮಾಡಬೇಕು ಎಂದು ಮಕ್ಕಳನ್ನು ಹುರಿದುಂಬಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ. ಹೊಂಗಯ್ಯ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ರವಿಕುಮಾರ ಕಡೆಮನಿ, ಉಪಾಧ್ಯಕ್ಷರಾದ ರತ್ನವ್ವ ಮುದೂರ, ಹಿಟ್ಟಿನಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ ಬಿರಾದಾರ, ಗ್ರಾ.ಪಂ ಕಾರ್ಯದರ್ಶಿ ದ್ಯಾಮಣ್ಣ ತಳವಾರ, ದ್ವಿತೀಯ ದರ್ಜೆ ಸಹಾಯಕ ಸೋಮನಾಥ ಬಳಬಟ್ಟಿ, ಗ್ರಾಮ ಪಂಚಾಯತಿಯ ಸರ್ವಸದಸ್ಯರು, ಗ್ರಾಮ ಪಂಚಾಯತಿಯ ಎಲ್ಲ ಸಿಬ್ಬಂದಿಯವರು ಹಾಗೂ ಇತರರು ಉಪಸ್ಥಿತರಿದ್ದರು.