ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಧರಣಿ – ಸರ್ಕಾರದ ಗಮನ ಸೆಳೆಯುವ ನಿರಂತರ ಪ್ರಯತ್ನ
ವಿಜಯಪುರ : ಸರ್ಕಾರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ಪ್ರಗತಿಪರ ಸಂಘಟನೆಗಳು ಹಾಗೂ ಸ್ಥಳೀಯ ನಾಗರಿಕರು ಒಗ್ಗೂಡಿ ನಡೆಸುತ್ತಿರುವ ಪಬ್ಲಿಕ್-ಪ್ರೈವೇಟ್ ಪಾರ್ಟ್ನರ್‌ಶಿಪ್ (PPP) ಮಾದರಿಯ ವಿರೋಧಿ ಹೋರಾಟ ಇಂದು 39ನೇ ದಿನಕ್ಕೆ ಕಾಲಿಟ್ಟಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಧರಣಿ ಪ್ರತಿಭಟನೆಯು ಸರ್ಕಾರದ ಗಮನಕ್ಕೆ ಬರದಿರುವುದನ್ನು ಖಂಡಿಸುತ್ತಾ, ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ನಿರ್ಧಾರಕ್ಕೆ ಬಂದಿದೆ.
ಮುದ್ದೇಬಿಹಾಳ ಕ್ಷೇತ್ರದ ಹಿರಿಯ ಪತ್ರಕರ್ತರು ಹಾಗೂ ಬಂಜಾರಾ ಸಮಾಜದ ಹಿರಿಯ ಮುಖಂಡರಾದ ಎಸ್.ಪಿ.ಸೇವಾಲಾಲ್ ಅವರು ಹೋರಾಟಕ್ಕೆ ಬೆಂಬಲ ಕೊಟ್ಟು ಮಾತನಾಡಿ “ಎಲ್ಲಾ ಮೂಲಭೂತ ಸೌಕರ್ಯಗಳನ್ನು ಜಿಲ್ಲೆ ಆಸ್ಪತ್ರೆ ಹೊಂದಿದ್ದಾಗ, ಸರ್ಕಾರ ಏಕೆ ಪಿಪಿಪಿ ಮಾದರಿ ತರುತ್ತಾ ಇದೆ ಎಂದು ಪ್ರಶ್ನೆ ಮಾಡಿದರು. ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ಒಗ್ಗೂಡಿ, ತಮ್ಮ ಸ್ವಾರ್ಥ ಬಿಟ್ಟು ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ತರುವ ಪ್ರಯತ್ನ ಮಾಡಬೇಕು” ಎಂದು ಆಗ್ರಹಿಸಿದರು.
PPP ಮಾದರಿ ಸಂಪೂರ್ಣ ರದ್ದತಿಯಾಗಬೇಕು. ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಖಾಸಗಿ ಕಂಪನಿಗಳ ಕೈಗೆ ವಹಿಸುವ ಯೋಜನೆಯನ್ನು ತಕ್ಷಣ ತ್ಯಜಿಸಬೇಕು. ಇದು ಬಡವರ ಚಿಕಿತ್ಸೆಯನ್ನು ದುಬಾರಿಯಾಗಿಸಿ, ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ.
PPP ಬಂದರೆ ಉಚಿತ ಚಿಕಿತ್ಸೆ ಸ್ಥಗಿತಗೊಳ್ಳಲಿದೆ.
PPP ಬೇಡ, ಸರ್ಕಾರಿ ಆರೋಗ್ಯ ಬೇಕು! ವಿಜಯಪುರ ಕಾಲೇಜು ನಮ್ಮದು – ಖಾಸಗಿಗೆ ಬಿಡೋದಿಲ್ಲ!” ಎಂಬ ಘೋಷಣೆಗಳು ಮೊಳಗಿವೆ.
39 ದಿನಗಳಿಂದ ನಮ್ಮ ಧ್ವನಿ ಕೇಳದ ಸರ್ಕಾರ ಮುಂದಿನ ದಿನಗಳಲ್ಲಿ ಬೇಡಿಕೆ ಈಡೇರಿಸದಿದ್ದರೆ, ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ.
ವಿವಿಧ ರಾಜಕೀಯ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳು ಮತ್ತು ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಹೋರಾಟ ಒಂದು ಕಾಲೇಜಿನ್ದು ಮಾತ್ರವಲ್ಲ, ರಾಜ್ಯದ ಎಲ್ಲ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಭವಿಷ್ಯದ ಪ್ರಶ್ನೆ.
ಬಂಜಾರಾ ಸಮಾಜದ ಮುಖಂಡರಾದ ಟಿ.ಕೆ. ಚವ್ಹಾಣ್, ಪವನ್.ಸಿ, ಸಿ.ಎಂ.ನಾಯಕ್, ಡಿ.ಕೆ. ನಾಯಕ್, ಡಿ.ಕೆ. ಲಮಾಣಿ, ಎನ್.ಜಿ.ನಾಯಕ್, ಸುನಿಲ್ ಚವ್ಹಾಣ್, ಹೋರಾಟ ಸಮಿತಿ ಸದ್ಯಸ್ಯರಾದ ಅಕ್ರಮ ಮಾಶಾಲ್ಕರ್, ಸಿದ್ದಲಿಂಗ ಬಾಗೇವಾಡಿ, ಸುರೇಶ್ ಬಿಜಾಪುರ, ಸುರೇಶ್ ಜೀಬಿ, ಕಿರಣ್ ಮೇಲಿನಕೇರಿ, ಭರತಕುಮಾರ್ ಎಚ್.ಟಿ, ಎಂ.ಎ. ಇಂಡೀಕರ್, ಜಾವೇದ್ ಅಗಸ್ಬಾಲ್, ಸಂಜು ಶೆಟಗಾರ, ಜಗದೇವ್ ಸೂರ್ಯವಂಶಿ, ಅನಿಲ್ ಹೊಸಮನಿ, ಶ್ರೀನಾಥ್ ಪೂಜಾರಿ, ಚನ್ನು ಕಟ್ಟಿಮನಿ, ಶ್ರೀಕಾಂತ್ ಕೊಂಡಗುಲಿ, ಶಿವಬಾಲಮ್ಮ ಕೊಂಡಗುಲಿ, ಲಕ್ಷ್ಮಣ್ ಹಂದ್ರಾಳ, ನಾಗೇಶ್ ಪೂಜಾರಿ, ಸಲಿಂ ಹಕರಾಣಿ, ಲಾಯಪ್ಪ ಇಹಾಳೆ, ಕಾವೇರಿ ರಜಪೂತ್ ಹಾಗೂ ಇತರರಿದ್ದರು.



















