ಶಿಕ್ಷಣದಿಂದ ಮಹಿಳಾ ಸಬಲೀಕರಣ ಸಾಧ್ಯ – ಪ್ರೊ. ಡಿ.ಎಂ. ಮದರಿ
ವಿಜಯಪುರ: ಉನ್ನತ ಶಿಕ್ಷಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿನಿಯರ ದಾಖಲಾತಿ ಹಾಗೂ ಹಾಜರಾತಿ ಹೆಚ್ಚಿಸಲು ಸರ್ಕಾರವು ಹಲವು ಪ್ರೋತ್ಸಾಹಕ ಯೋಜನೆಗಳನ್ನು ಜಾರಿಗೆ ತಂದಿದ್ದು, ವಿದ್ಯಾರ್ಥಿನಿಯರು ಈ ಅವಕಾಶಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅರ್ಥಶಾಸ್ತç ವಿಭಾಗದ ಮುಖ್ಯಸ್ಥ ಮತ್ತು ಕಾರ್ಯಾಗಾರದ ಸಂಯೋಜಕ ಪ್ರೊ. ಡಿ.ಎಂ. ಮದರಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅರ್ಥಶಾಸ್ತç ವಿಭಾಗ ಹಾಗೂ ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಾ ಅಭಿಯಾನ ಉನ್ನತ ಶಿಕ್ಷಣ ಮಂಡಳಿ, ಭಾರತ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಕರ್ನಾಟಕ ಸರ್ಕಾರ ಬೆಂಗಳೂರು ಮತ್ತು ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಮಮದಾಪೂರ ಜಂಟಿಯಾಗಿ ಇತ್ತೀಚಿಗೆ ಆಯೋಜಿಸಿದ್ದ ಪರಿಶಿಷ್ಠ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿನಿಯರ ಪದವಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರಿಗೋಸ್ಕರ ಇಂಟರ್ನ್ಶಿಪ್ ಮತ್ತು ನಿಯೋಜನೆ ಸೇವೆಗಳ ಕುರಿತ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಶುಲ್ಕ ಮರುಪಾವತಿ, ಉಚಿತ ವಸತಿ, ಸಾರಿಗೆ, ಪಠ್ಯಪುಸ್ತಕಗಳು ಮತ್ತು ವಿದ್ಯಾರ್ಥಿವೇತನಗಳಂತಹ ಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಮೀಣ ವಲಯದ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣದತ್ತ ಹೆಚ್ಚು ಆಸಕ್ತಿ ತೋರಲು ಸರ್ಕಾರ ಪ್ರಯತ್ನಿಸುತ್ತಿದೆ. ಈ ಸೌಲಭ್ಯಗಳ ಸದುಪಯೋಗಪಡಿಸಿಕೊಂಡು ಮಹಿಳೆಯರು ಶಿಕ್ಷಣದ ಮೂಲಕ ಸಬಲೀಕರಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಾರ್ಯಾಗಾರದಲ್ಲಿ ಕಾರ್ಯಾಗಾರದ ಸಹಾಯಕ ಸಂಯೋಜಕ ಡಾ.ಕೆ.ಪಿ.ಸುರೇಶ ಮಾತನಾಡಿ, ಭಾರತ ಸರ್ಕಾರದ ಉನ್ನತ ಶಿಕ್ಷಣದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಮಹಿಳಾ ವಿಶ್ವವಿದ್ಯಾಲಯ ನೀಡುತ್ತಿರುವ ಸಹಕಾರವನ್ನು ಅವರು ಶ್ಲಾಘಿಸಿದರು.
ಡಾ. ಜ್ಯೋತಿ ಪಟ್ಟಣಶೆಟ್ಟಿ ಮತ್ತು ಡಾ. ಭಕ್ತಿ ಮಹೀಂದ್ರಕರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು.
ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಶಿವಾನಂದ ಹಿರೇಮಠ ಅಧ್ಯಕ್ಷೀಯ ನುಡಿಗಳನ್ನಾಡಿದರು. ಡಾ.ಹಡಪದ ವಂದಿಸಿದರು. ಬೋಧಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



















