ಬಸವನ ಬಾಗೇವಾಡಿ: ತಾಲೂಕಿನ ನರಸಲಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಂಬಳನೂರ ಗ್ರಾಮದ ಲ್ಲಿ ಕೊಳವೆ ಬಾವಿಯ ನೀರು ಗ್ರಾಮಕ್ಕೆ ಸರಬರಾಜು ಮಾಡುವ ಪೈಪ್ ಒಡೆದಿದ್ದರಿಂದ ಕಳೆದ ಒಂದು ವಾರಗಳಿಂದ ನೀರು ಪೋಲಾಗುತ್ತಿದೆ. ಹನುಮಾನ ದೇವಸ್ಥಾನದ ಹತ್ತಿರ ಪೈಪು ಒಡೆದು ನೀರು ವ್ಯರ್ಥ ಮಣ್ಣುಪಾಲಾಗುತ್ತಿದೆ. ಇದು ಬೆಸಿಗೆ ಕಾಲವಾಗಿದ್ದರಿಂದ ಬಿಸಿಲಿನ ಬೆಗೆಗೆ ವಿಶ್ರಾಂತಿ ಪಡೆಯಲು ಗ್ರಾಮದ ಹಿರಿಯರು ಯುವಕರು ದೇವಸ್ಥಾನದ ಹತ್ತಿರ ಆಲದ ಮರದ ನೆರಳಿನ ಕೆಳಗಿರುವ ಕಂಪೌಂಡ ಮೇಲೆ ಕುಳಿತುಕೊಳ್ಳುತ್ತಾರೆ. ಆದರೆ ಕುಡಿಯುವ ನೀರಿನ ಪೈಪ್ ಒಡೆದು ರಸ್ತೆಯ ಮೇಲೆ ನಿಂತು ಮಲಿನಗೊಂಡು ಗಬ್ಬು ವಾಸನೆ ಬಿರುತ್ತಿದ್ದರು ಸಂಬಂಧಿಸಿದ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೋಡಿಯೂ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.
ಜಿಲ್ಲೆಯ ಎಲ್ಲೆಡೆ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಗ್ರಾಮಗಳಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಿದಂತೆ ನೀರಿನ ಸಮಸ್ಯೆ ತೀವ್ರವಾಗಿ ಕಾಡುವ ಮುಂಚೆ ಕುಡಿಯುವ ನೀರಿಗಾಗಿ ಸಾರ್ವಜನಿಕರು ಪರದಾಡುತ್ತಿದ್ದಾರೆ. ಇನ್ನು ಜನ-ಜಾನುವಾರುಗಳ ಸ್ಥಿತಿ ಕೇಳುವವರಿಲ್ಲದಾಗಿದೆ. ಕೆಲವು ಗ್ರಾಮಗಳಲ್ಲಿ ಈಗಾಗಲೇ ಟ್ಯಾಂಕರ್ ಮೂಲಕ ನೀರು ಪಡೆಯುವ ಪರಿಸ್ಥಿತಿ ಬರುವ ಮುಂಚೆಯೇ ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ ದುರಸ್ತಿಗೆ ಮುಂದಾಗದ ಕಾರಣ ನೀರು ಹಾಳಾಗುತ್ತಿದೆ. ಗ್ರಾಮದಲ್ಲಿ ನೀರು ಪೋಲಾಗುತ್ತಿರುದನ್ನು ಕಂಡು ಸಾರ್ವಜನಿಕರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಾಗೂ ಗ್ರಾಮದಲ್ಲಿ ಮೂರು ಜನ ಸದಸ್ಯರಿದ್ದಾರೆ ಕರೆ ಮಾಡಿದರೆ ಕರೆ ಸ್ವಿಕರಿಸಲ್ಲಾ ಎಂದು ಗ್ರಾಮದ ಯುವಕ ದಸ್ತಗಿರಿ ಬಾಗಲಕೋಟ ಆರೋಪಿಸಿದ್ದಾರೆ. ಕೂಡಲೇ ಇಲ್ಲಿನ ಅಧಿಕಾರಿಗಳು ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಪೈಪ್ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.