ಇಂಡಿ : ಕಾಂಗ್ರೆಸ್ ಏನೇ ಮಾಡಿದ್ರೂ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಒಡೆದ ಮನೆ ಆಗಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. ಇಂಡಿ ಪಟ್ಟಣದ ಬಸವೇಶ್ವರ ವೃತದಲ್ಲಿ
ವಿಜಯ ಸಂಕಲ್ಪ ಯಾತ್ರೆಯಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತಾನಾಡಿದ ಅವರು, ಶಾಮನೂರು ಶಿವಶಂಕ್ರೆಪ್ಪ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಮುಖ್ಯಮಂತ್ರಿಯ ಆಕಾಂಕ್ಷೆಯಲ್ಲಿದ್ದು, ಅದಕ್ಕಾಗಿ
ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂದು ಲೇವಡಿ ಮಾಡಿದರು. ಪಂಚ ನದಿಗಳು ಹರಿದ ಜಿಲ್ಲೆಯ ನೀರಾವರಿಯ ಅಭಿವೃದ್ಧಿಯ ಕೆಲಸ ಮಾಡಲಿಲ್ಲ. ಇನ್ನೂ ಸಿದ್ದರಾಮಯ್ಯ ಸರಕಾರದಲ್ಲಿ ಜಿಲ್ಲೆಯ ನೀರಾವರಿ ಯೋಜನೆಗೆ ಅನುದಾನ ನೀಡಲಿಲ್ಲ. ಆದರೆ ರೇವಣಸಿದ್ದ ಏತ ನೀರಾವರಿ ಯೋಜನೆ 3 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದರು. ಕಾರ್ಯಕರ್ತರು ಶಾಂತೇಶ್ವರ ಮೇಲೆ ಪ್ರಮಾಣ ಮಾಡಿ ಬಿಜೆಪಿ ಗೆಲ್ಲಿಸುವ ಸಂಕಲ್ಪ ಮಾಡಿ ಎಂದರು.
ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಕಾರ್ಯಕರ್ತರ ಉತ್ಸಾಹ ಹೆಚ್ಚಾಗಿದೆ. ಬಿಜೆಪಿ ಪಕ್ಷದ ಅಭ್ಯರ್ಥಿಗಳು ಶಾಸಕರು ಆಗುವುದು ಶತಸಿದ್ದ. ನಾವು ಈಗಾಗಲೇ 48 ಕ್ಷೇತ್ರಗಳಲ್ಲಿ ಯಾತ್ರೆ ಮಾಡಿದ್ದು, ಇಂಡಿ ಕ್ಷೇತ್ರ 49ನೇ ಕ್ಷೇತ್ರವಾಗಿದೆ. ಇಲ್ಲಿಯ ಕಾರ್ಯಕರ್ತರ ಹುಮ್ಮಸ್ಸು ಬಹಳಷ್ಟಿದೆ. ಪಕ್ಷ ಆಂತರಿಕ ಸರ್ವೇ ಮಾಡಿ ಟಿಕೆಟ್ ನೀಡುತ್ತದೆ. ಹೀಗಾಗಿ ಯಾರು ಹತಾಶರಾಗದೆ ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು. ಇನ್ನೂ ಫಯರ್ ಬ್ರ್ಯಾಂಡ್ ವಿಜಯಪುರ ನಗರದ ಶಾಸಕ ಬಸವನಗೌಡ ಯತ್ನಾಳ ಬರದೇಯಿರುವುದು ಕಾರ್ಯಕರ್ತರು ಅಭಿಮಾನಿಗಳಿಗೆ ನಿರಾಸೆ ಮೂಡಿತು. ಅದರಲ್ಲಿಯೂ ಇನ್ನೂ ಹಲವಾರು ಸಚಿವರು ಬರುವ ನೀರಿಕ್ಷೆ ಇತ್ತು. ಸಿ ಸಿ ಪಾಟೀಲ, ಬೈರತಿ ಬಸವರಾಜ, ಶಶಿಕಲಾ ಜೊಲ್ಲೆ ಜೊತೆಗೆ ಜಿಲ್ಲೆಯ ಸಂಸದ ರಮೇಶ ಜಿಗಜಿಣಿಗಿ ಆದರೆ ಇವರಾರು ಬರಲಿಲ್ಲ ಎಂದು ಮಧ್ಯದಲ್ಲಿ ಕೆಲವು ಕಾರ್ಯಕರ್ತರು ಅಭಿಮಾನಿಗಳು ಮನೆಗೆ ತೆರಳಿದರು. ಅದಲ್ಲದೇ ಸಂಸದ ರಮೇಶ ಜಿಗಜಿಣಿಗಿ ಇಂಡಿಗೆ ಬಾರದ ಬಗ್ಗೆ ಕಾರ್ಯಕರ್ತರು ಕಿವಿಯಲ್ಲಿಯೇ ಪಿಸುಗುಟ್ಟುತ್ತಿದ್ದರು. ಈ ಹಿಂದೆ ನಡೆದ ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯಕ್ರಮಕ್ಕೂ ಬರಲಿಲ್ಲ ಜೊತೆಗೆ ವಿಜಯ ಸಂಕಲ್ಪ ಬಾರದೇ ಇರುವ ಬಗ್ಗೆ ಕಾರ್ಯ ಕರ್ತರಲ್ಲಿ ಗುಸ್ಸು ಗುಸ್ಸು ಮಾತುಗಳು ಕೇಳಿ ಬರುತ್ತಿವು.