ಬೆಂಗಳೂರು: ಪ್ರತಿಷ್ಠಿತ ಸುರಾನಾ ಕಾಲೇಜಿನ 3 ನೇ ಆವೃತ್ತಿಯ ಸಿಜಿಎಸ್ ಕಾನ್ ಕ್ಲೇವ್ ನ – ವಾರ್ಷಿಕ ಪರಿವರ್ತನೆಯ ನಾಯಕತ್ವ ಶೃಂಗಸಭೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ 1 ಮೇ 2022 ರಂದು ಬೆಂಗಳೂರಿನ ಸೋಫಿಯಾ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಡಾ. ಕಿರಣ್ ಬೇಡಿ, ಪದ್ಮಶ್ರೀ ಡಾ. ರಮಣ ರಾವ್, ಸಮರ್ಥನಂ ಸಂಸ್ಥೆಯ ಡಾ. ಮಹಾಂತೇಶ್, ವಿದ್ವಾಂಸ ಡಾ. ಎಚ್. ಆರ್ ಅಪ್ಪಣ್ಣಯ್ಯ ಅವರಿಗೆ ಜಿ ಸಿ ಸುರಾನಾ ಲೀಡರ್ ಶಿಪ್ ಪ್ರಶಸ್ತಿ ನೀಡಿ ಗೌರವಿಸಾಗುವುದು ಎಂದು ಸುರಾನಾ ಎಜುಕೇಶನಲ್ ಇನ್ಸಿಟ್ಯೂಷನ್‌ಗಳ ವ್ಯವಸ್ಥಾಪಕ ಟ್ರಸ್ಟಿ ಡಾ. ಅರ್ಚನಾ ಸುರಾನಾ ತಿಳಿಸಿದರು.
ಇಂದು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೇ 1 ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿರುವ ಈ ಕಾನ್ ಕ್ಲೇವ್ ಬೆಂಗಳೂರಿನಲ್ಲಿರುವ ಶಿಕ್ಷಣ ಸಂಸ್ಥೆಗಳ ನಡುವಿನ ಗುಣಮಟ್ಟವನ್ನು ಉತ್ತಮಗೊಳಿಸುವುದು ಮತ್ತು ಜೀವನದ ವಿವಿಧ ಹಂತಗಳಿಂದ ಉತ್ತಮವಾದುದನ್ನು ಒಂದೇ ಸೂರಿನಡಿ ತರುವುದು ಮತ್ತು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಶಿಕ್ಷಣ ತಜ್ಞರಿಗೆ ಸಂಬಂಧಿಸಿದ ವಿಚಾರಗಳ ಕುರಿತು ವಿಚಾರ ಮಂಥನ ಮಾಡುವ ವೇದಿಕೆಯಾಗಲಿದೆ ಎಂದು ಹೇಳಿದರು.
ಈ ಸಮಾರಂಭಕ್ಕೆ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ, ಐಟಿ & ಬಿಟಿ, ವಿಜ್ಞಾನ & ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಈ ಸಂದರ್ಭದಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಸಾಧನೆ ತೋರಿದ ಗಣ್ಯರಿಗೆ ಜಿಸಿ ಸುರಾನ ಲೀಡರ್ ಶಿಪ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ- ಅತ್ಯುತ್ತಮ ಆಡಳಿತಗಾರ, ಅತ್ಯುತ್ತಮ ಪರಿವರ್ತನಾ ನಾಯಕ, ಪ್ರತಿಷ್ಠಿತ ನಾಯಕ ಮತ್ತು ಸಮುದಾಯ ಮತ್ತು ದೇಶಕ್ಕಾಗಿ ಉತ್ತಮ ಸೇವೆ ಸಲ್ಲಿಸಿದ ಗಣ್ಯರಿಗೆ ಜೀವಮಾನ ಶ್ರೇಷ್ಠ ಪ್ರಶಸ್ತಿ ನೀಡಲಾಗುವುದು.
ಈ ವರ್ಷ ನಿವೃತ್ತ ಐಪಿಎಸ್ ಅಧಿಕಾರಿ ಮತ್ತು ಪಾಂಡಿಚೆರಿಯ ಮಾಜಿ ಲೆಫ್ಟಿನೆಂಟ್ ಗೌರ್ನರ್ ಡಾ.ಕಿರಣ್ ಬೇಡಿ, ವಿಶ್ವ ಅಂಧರ ಕ್ರಿಕೆಟ್ ಲಿಮಿಟೆಡ್ ಮತ್ತು ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಡಾ.ಮಹಂತೇಶ್, ವಿದ್ವಾಂಸ ಮತ್ತು ಲೇಖಕರಾದ ಡಾ.ಎಚ್.ಆರ್.ಅಪ್ಪಣ್ಣಯ್ಯ ಹಾಗೂ ಖ್ಯಾತ ಹೃದ್ರೋಗ ತಜ್ಞ ಮತ್ತು ಪದ್ಮಶ್ರೀ ಪುರಸ್ಕೃತ ಡಾ.ರಮಣ ರಾವ್ ಅವರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದರು.
ಸುರಾನ ಶಿಕ್ಷಣ ಸಂಸ್ಥೆಗಳು(ಎಸ್ಇಐ) ಸಂಸ್ಥಾಪಕ ಅಧ್ಯಕ್ಷ ಮತ್ತು ಪ್ರಮುಖ ಫಾರ್ಮಾಸಿಟಿಕಲ್ ಕಂಪನಿಯಾಗಿರುವ ಮೈಕ್ರೋಲ್ಯಾಬ್ಸ್ ನ ಸಂಸ್ಥಾಪಕ ದಿವಂಗತ ಜಿ.ಸಿ.ಸುರಾನ ಅವರ ಸ್ಮರಣಾರ್ಥ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ಸುರಾನಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಭವಾನಿ ಎಂ.ಆರ್ ಮಾತನಾಡಿ, ಈ ವರ್ಷ ಎಸ್ಇಐನ 27 ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಈ ಶಿಕ್ಷಣ ಸಂಸ್ಥೆಗಳಲ್ಲಿ ಕೈಗೆಟುಕುವ ದರದಲ್ಲಿ ಪದವಿಪೂರ್ವ, ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ನೀಡಲಾಗುತ್ತಿದೆ. ಕಲೆ, ವಿಜ್ಞಾನ, ಐಟಿ, ವಾಣಿಜ್ಯ ಮತ್ತು ಮ್ಯಾನೇಜ್ಮೆಂಟ್ ಕೋರ್ಸ್ ಗಳನ್ನು ನೀಡಲಾಗುತ್ತಿದೆ. ಈ ಸಂಸ್ಥೆಯು ಇತ್ತೀಚೆಗೆ ಯುಜಿಸಿ, ಕರ್ನಾಟಕ ಸರ್ಕಾರ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ವಾಯತ್ತ ಸಂಸ್ಥೆ ಎಂದು ಪರಿಗಣಿಸಲ್ಪಟ್ಟಿದೆ.
ಈ ಕಾನ್ ಕ್ಲೇವ್ ನಲ್ಲಿ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು, ಎಸ್ಇಐನ ಶಿಕ್ಷಕರು, ಉದ್ಯಮ ಪಾಲುದಾರರು, ಶಿಕ್ಷಣ ತಜ್ಞರು ಮತ್ತು ವಿವಿಧ ಉದ್ಯಮಗಳ ವೃತ್ತಿಪರರು ಸೇರಿದಂತೆ 1000 ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಅಧಿಕೃತ ಸಮಾರಂಭದ ಬಳಿಕ ಸಂಜೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಸಾಧನೆ ಮಾಡಿರುವ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತದೆ. ಸುರಾನ ಕಾಲೇಜಿನ ಹಳೆಯ ವಿದ್ಯಾರ್ಥಿಯೂ ಆಗಿರುವ ಅಂತಾರಾಷ್ಟ್ರೀಯ ಕಲಾವಿದ ಮಂಜುನಾಥ್ ಎನ್ಎಸ್ ಅವರ ನೇತೃತ್ವದ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.