ನಾಗಠಾಣ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆ

ವಿಜಯಪುರ: ತಾಲೂಕಿನ ನಾಗಠಾಣ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಶ್ರೀ ಎಸ್.ಐ. ಮೇತ್ರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು 2026-27ನೇ ಸಾಲಿನ ವಿಜಯಪುರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ವಿಜಯಪುರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಶಾಲೆಯ ವಿದ್ಯಾರ್ಥಿಗಳು ಖೋಖೋ ಹಾಗೂ ವಿವಿಧ ಓಟ ಮತ್ತು ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಶ್ರಾವಣಿ ಗುಣಕಿ ನಾಯಕತ್ವದ ಖೋಖೋ ತಂಡ ಪ್ರಥಮ ಸ್ಥಾನ ಪಡೆದಿದೆ. 800 ಮೀಟರ್ ಓಟದಲ್ಲಿ ಪ್ರತೀಕ್ಷಾ ಅಗಸರ ಪ್ರಥಮ, ರಿಂಕು ರಾಠೋಡ ದ್ವಿತೀಯ ಹಾಗೂ ಪ್ರಿಯಾಂಕಾ ಕತ್ನಳ್ಳಿ ತೃತೀಯ ಸ್ಥಾನ ಪಡೆದಿದ್ದಾರೆ. 4×100 ಮೀಟರ್ ರಿಲೇ ಓಟದಲ್ಲಿ ಸಂಜನಾ ಅರಕೇರಿ ಹಾಗೂ ತಂಡ ಪ್ರಥಮ ಸ್ಥಾನ ಗಳಿಸಿದೆ.
4000 ಮೀಟರ್ ಓಟದಲ್ಲಿ ಅಶ್ವತಾ ಚಾಂದಕವಟೆ ದ್ವಿತೀಯ, 1500 ಮೀಟರ್ ಓಟದಲ್ಲಿ ಸಂತೋಷಕುಮಾರ ಹೂಗಾರ ದ್ವಿತೀಯ ಸ್ಥಾನ ಪಡೆದಿದ್ದಾರೆ. ಗುಂಡು ಎಸೆತದಲ್ಲಿ ಅಶ್ವಿನಿ ಹುಣಶ್ಯಾಣ ತೃತೀಯ ಸ್ಥಾನ ಗಳಿಸಿದ್ದಾರೆ.
ಯುವಕರ ವಿಭಾಗದಲ್ಲಿ ಚಕ್ರ ಎಸೆತ ಹಾಗೂ ಭರ್ಚಿ ಎಸೆತದಲ್ಲಿ ಬೀರಪ್ಪ ಪೂಜಾರಿ ದ್ವಿತೀಯ ಸ್ಥಾನ ಪಡೆದಿದ್ದು, ಉದ್ದ ಜಿಗಿತದಲ್ಲಿ ಪುಂಡಲಿಕ ಕತ್ನಳ್ಳಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಉಪಪ್ರಾಂಶುಪಾಲ ಪ್ರ.ರೇ. ಮೆಂಚ್, ಶಾಲಾ ಸುಧಾರಣಾ ಸಮಿತಿ ಸದಸ್ಯರು, ದೈಹಿಕ ಶಿಕ್ಷಕಿ ಪಿ.ಎಸ್. ಕಣಬೂರ, ಶಿಕ್ಷಕ ವೃಂದ ಹಾಗೂ ಗ್ರಾಮದ ಹಿರಿಯರು ಅಭಿನಂದನೆ ಸಲ್ಲಿಸಿ, ಜಿಲ್ಲಾ ಮಟ್ಟದಲ್ಲೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.



















