ಆ. 21, 22, 23 ರಂದು ವಿಶೇಷ ಲೋಕ್ ಅದಾಲತ್
ಅದಾಲತ್ ನಲ್ಲಿ ಸುಪ್ರಿಂನಲ್ಲಿರುವ ವ್ಯಾಜ್ಯ ಪರಿಹರಿಸಿಕೊಳ್ಳಬಹುದು
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಹೇಳಿಕೆ
ವಿಜಯಪುರ, ಏ.30: ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸೌಹಾರ್ದಯುತವಾಗಿ ಮತ್ತು ತ್ವರಿತವಾಗಿ ಇತ್ಯರ್ಥಪಡಿಸಲು ವಿಶೇಷ ಲೋಕ್ ಅದಾಲತ್ ಆ. 21, 22 ಮತ್ತು 23 ರಂದು ನಡೆಯಲಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಕಾರ್ಯನಿರ್ವಾಹಕ ಅಧ್ಯಕ್ಷರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಶ್ರೀಮತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿಗಳಾದ ಆರ್. ದೇವ್‍ದಾಸ್ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಅಧ್ಯಕ್ಷರು, ಹೆಚ್‍ಸಿಎಲ್‍ಎಸ್‍ಸಿ ತಿಳಿಸಿದ್ದಾರೆ.
ಗುರುವಾರ ಎಲ್ಲ ಜಿಲ್ಲಾ ಕೇಂದ್ರಗಳ ಜಿಲ್ಲಾ ನ್ಯಾಯಾಧೀಶರು ಹಾಗೂ ಮಾಧ್ಯಮದವರೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸೌಹಾರ್ದಯುತ ಮತ್ತು ತ್ವರಿತವಾಗಿ ಇತ್ಯರ್ಥಪಡಿಸಲು ಈ ವಿಶೇಷ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದವರು ತಿಳಿಸಿದರು.
ಸುಪ್ರೀಂ ಕೋರ್ಟ್ ನಲ್ಲಿರುವ ವ್ಯಾಜ್ಯಗಳನ್ನು ಪರಸ್ಪರ ಸಹಮತದಿಂದ ಹಾಗೂ ಒಮ್ಮತದಿಂದ ಪ್ರಕರಣ ಇತ್ಯರ್ಥಪಡಿಸಿಕೊಂಡು ನೆಮ್ಮದಿ ಬದುಕು ಕಟ್ಟಿಕೊಳ್ಳಬಹುದಾಗಿದೆ. ಇದರಿಂದ ಸಮಯ ಹಾಗೂ ಹಣದ ಉಳಿತಾಯವಾಗುತ್ತದೆ ಎಂದವರು ತಿಳಿಸಿದರು.
ಸುಪ್ರೀಂ ಕೋರ್ಟ್ ನಲ್ಲಿ ವ್ಯಾಜ್ಯಗಳಿದ್ದರೂ ಪಕ್ಷಗಾರರು ಸುಪ್ರೀಂ ಕೋರ್ಟ್ ಗೆ ಹಾಜರಾಗಬೇಕಾಗಿಲ್ಲ ವಿಡಿಯೋ ಸಂವಾದದ ಮೂಲಕ ತಾಲೂಕಾ, ಜಿಲ್ಲಾ ನ್ಯಾಯಾಲಯಗಳ ಕಾನೂನು ಸೇವಾ ಪ್ರಾಧಿಕಾರದ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ ಎಂದವರು ವಿವರಿಸಿದರು.
ತಾಲೂಕಾ ಜಿಲ್ಲಾ ನ್ಯಾಯಾಧೀಶರು ಈ ವ್ಯಾಜ್ಯಗಳನ್ನು ಬಗೆ ಹರಿಸಿ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸುತ್ತಾರೆ. ನಂತರ ಸುಪ್ರೀಂ ಕೋರ್ಟ್ ನಲ್ಲಿ ಲೋಪದೋಷಗಳಿದ್ದರೆ ಸರಿಪಡಿಸಿ ಅನುಮೋದನೆ ನೀಡಲಾಗುವುದು ಎಂದರು.
ದೇಶಾದ್ಯಂತ ಮಧ್ಯಸ್ಥಿಕೆ ಹಾಗೂ ಸಂಧಾನದ ಮೂಲಕ ವಿವಾದಗಳನ್ನು ಬಗೆಹರಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಈ ವಿಶೇಷ ಕ್ರಮ ಕೈಗೊಂಡಿದ್ದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ವಿಡಿಯೋ ಸಂವಾದಲ್ಲಿ ವಿಜಯಪುರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಲೋಕೇಶ ಹವಲೆ ಭಾಗಿಯಾಗಿ ಮಾತನಾಡಿ, ವಿಜಯಪುರ ಜಿಲ್ಲೆ ಹಾಗೂ ಎಲ್ಲ ತಾಲೂಕುಗಳಿಗೆ ಸಂಬಂಧಿಸಿದ ಒಟ್ಟು 213 ಪ್ರಕರಣಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇವೆ. ಕಕ್ಷಿದಾರರ ಅನುಕೂಲಕ್ಕಾಗಿ ವಿಜಯಪುರ ಜಿಲ್ಲಾ ನ್ಯಾಯಾಲಯದ ವಿಡಿಯೋ ಕಾನ್ಫರೆನ್ಸ್ ಹಾಲ್ ಮೂಲಕ ಸಂಧಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣಗಳು ಬಾಕಿ ಇರುವ ಜಿಲ್ಲೆಯ ಕಕ್ಷಿದಾರರು ಖುದ್ದಾಗಿ, ತಮ್ಮ ವಕೀಲರ ಮೂಲಕ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ ಈ ಸೌಹಾರ್ದಯುತ ಸಂಧಾನ ಪ್ರಕ್ರಿಯೆಯ ಲಾಭ ಪಡೆದುಕೊಳ್ಳಬೇಕು ಎಂದು ಲೋಕೇಶ ಹವಲೆ ತಿಳಿಸಿದರು.



















