ಅಬ್ಬರದ ಆಚರಣೆಗಿಂತ ಅಂಬೇಡ್ಕರ್ ವಿಚಾರಧಾರೆಗೆ ಒತ್ತು ನೀಡಿ: ಡಾ. ಚನ್ನವೀರ ಶ್ರೀ
ಮುದ್ದೇಬಿಹಾಳ: ಅಬ್ಬರದ ಆಚರಣೆಗಳಿಗೆ ಕಡಿವಾಣ ಹಾಕುವ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಮುತ್ತೈದೆಯರಿಗೆ ಉಡಿ ತುಂಬುವಂತಹ ಪುಣ್ಯದ ಕೆಲಸಗಳನ್ನು ಮಾಡಬೇಕು. ಇಂತಹ ಅರ್ಥಪೂರ್ಣ ಪದ್ಧತಿಗಳನ್ನು ಮುಂದುವರಿಸಿಕೊಂಡು ಹೋದಾಗ ಮಾತ್ರ ಜಯಂತಿ ಆಚರಣೆಗಳಿಗೆ ನೈಜ ಮಹತ್ವ ಸಿಗುತ್ತದೆ ಎಂದು ಕುಂಟೋಜಿ ಸಂಸ್ಥಾನ ಮಠದ ಡಾ. ಚನ್ನವೀರ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ತಾಲ್ಲೂಕಿನ ನಾಲತವಾಡ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸ್ಥಳೀಯ ದಲಿತ ಪರ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾನತೆಯ ಚಿಂತನೆ ಅಗತ್ಯ
ಇತ್ತೀಚಿನ ದಿನಗಳಲ್ಲಿ ಜಾತಿಗೊಂದು ಜಯಂತಿಗಳನ್ನು ಆಚರಿಸಲಾಗುತ್ತಿದೆ. ಎಲ್ಲರೂ ನಮ್ಮವರು ಎನ್ನುತ್ತಲೇ ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಿರುವುದು ಸಮಾನತೆ ತರಲು ಸಾಧ್ಯವೇ ಎಂದು ಪ್ರಶ್ನಿಸಿದ ಶ್ರೀಗಳು, “ಜಾತಿಗೊಬ್ಬ ಮಹಾನ್ ಪುರುಷರ ಜಯಂತಿಗಳನ್ನು ಆಚರಿಸುವುದು ಕೇವಲ ಮನರಂಜನೆಯಂತಾಗುತ್ತದೆ. ಮೊದಲು ನಾವೆಲ್ಲ ಒಂದೇ ಎನ್ನುವ ಭಾವನೆ ಬೆಳೆಯಬೇಕು. ಅಂಬೇಡ್ಕರ್ ಅವರ ಜಯಂತಿ ವೇಳೆ ಕೇವಲ ಮೆರವಣಿಗೆಗಳಿಗೆ ಒತ್ತು ನೀಡದೆ, ಅವರ ಜೀವನ ಮತ್ತು ಸಾಧನೆ ಕುರಿತು ಜನರಿಗೆ ತಿಳಿಹೇಳುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವೈ.ಎಚ್. ವಿಜಯಕರ್, ಸಿದ್ದಣ್ಣ ಕಟ್ಟಿಮನಿ ಸೇರಿದಂತೆ ಇತರ ಗಣ್ಯರು, ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿಗೆ ಸೀಮಿತವಾಗಿ ಸಂವಿಧಾನ ರಚಿಸಲಿಲ್ಲ. ದೇವದಾಸಿ ಪದ್ಧತಿ, ಜೀತ ಪದ್ಧತಿ ಮತ್ತು ಅಸ್ಪೃಶ್ಯತೆಯಿಂದ ನಲುಗಿದ್ದ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಅವರು ಶ್ರಮಿಸಿದರು. ನಾವು ಬಲಹೀನರಲ್ಲ, ಪ್ರತಿನಿತ್ಯ ಸಂವಿಧಾನದ ಪೂರ್ವ ಪೀಠಿಕೆಯನ್ನು ಓದುವ ಮೂಲಕ ನಮ್ಮ ಹಕ್ಕು ಮತ್ತು ಜವಾಬ್ದಾರಿಗಳನ್ನು ಅರಿಯಬೇಕು ಎಂದು ತಿಳಿಸಿದರು.
ಸಾಧಕರಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮುನ್ನ ನಾಲತವಾಡ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಗಳ ನೇತೃತ್ವದಲ್ಲಿ ಸಸಿಗೆ ನೀರುಣಿಸುವ ಮೂಲಕ ಪರಿಸರ ಪ್ರೇಮ ಮೆರೆಯಲಾಯಿತು.
ಕಾರ್ಯಕ್ರಮದಲ್ಲಿ ಶಂಕರರಾವ್ ದೇಶಮುಖ, ಮಹಾಂತೇಶ ಗಂಗನಗೌಡ್ರ, ಶೇಖರ್ ಮೇಟಿ, ಎಲ್.ಎಚ್.ಅವಟಿ, ಎಚ್.ಟಿ.ಕುರಿ, ಕಾಂತು ಹಿರೇಮಠ, ಬಾಲಚಂದ್ರ ಹುಲ್ಲೂರ, ಹರೀಶ ನಾಟಿಕರ್, ಸಿ.ಜಿ.ವಿಜಯಕರ್, ಶ್ರೇಯಾ ತಳವಾರ, ತಿಪ್ಪಣ್ಣ ದೊಡಮನಿ, ಗಂಗಾಧರ ಜೂಲಗುಡ್ಡ, ಭೀಮಣ್ಣ ಗುರಿಕಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


















