ಮಹಿಳಾ ದಿನಾಚರಣೆಯ ಅಂಗವಾಗಿ ಯುನೈಟೆಡ್ ಆಸ್ಪತ್ರೆಯ ವಿಶೇಷ ಆರೋಗ್ಯ ಪ್ಯಾಕೇಜ್ ಲೋಕಾರ್ಪಣೆ:
ಬೆಂಗಳೂರು: ಮೊದಲು ಮಹಿಳೆಯರು ಹೆಣ್ಣು ಮಗುವಿನ ಮೇಲಿನ ಅಸಡ್ಡೆಯನ್ನು ಕಡಿಮೆ ಮಾಡಿಕೊಳ್ಳುವ ಅವಶ್ಯಕತೆ ಹೆಚ್ಚಾಗಿದೆ ಎಂದು ಮಾನ್ಯ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶ್ರೀಮತಿ ಶಶಿಕಲಾ ಅ ಜೊಲ್ಲೆ ಅವರು ಅಭಿಪ್ರಾಯಪಟ್ಟರು.
ಇಂದು ಜಯನಗರದ ಯುನೈಟೆಡ್ ಆಸ್ಪತ್ರೆಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹೊರತಂದಿರುವ ಕೇವಲ 390 ರೂಪಾಯಿಗಳಲ್ಲಿ ಮಹಿಳಾ ಸಮಗ್ರ ಆರೋಗ್ಯ ಪರೀಕ್ಷೆಯನ್ನು ಮಾಡುವಂತಹ ವಿಶೇಷ ಪ್ಯಾಕೇಜ್‌ಗೆ ಚಾಲನೆ ನೀಡಿ ಮಾತನಾಡಿದರು.
ಸೊಸೆ ಅಥವಾ ಮಗಳು ಹೆರಿಗೆ ಆದಾಗ ಮೊದಲು ಕೇಳುವ ಪ್ರಶ್ನೆ ಗಂಡೋ, ಹೆಣ್ಣೋ ಎಂದು. ತಾನೇ ಮಹಿಳೆಯಾಗಿದ್ದು ಹೆಣ್ಣು ಮಗು ಜನಿಸಿದಾಗ ಅಸಡ್ಡೆಯನ್ನು ತೋರಿಸುವ ಮೂಲಕ ಗಂಡ ಮಗುವೇ ಶ್ರೇಷ್ಠ ಎಂದು ಎತ್ತಾಡುತ್ತಾರೆ. ಈ ರೀತಿಯಾಗಿ ಮಹಿಳೆಯರೇ ಹೆಣ್ಣು ಮಗುವಿನ ಮೇಲಿನ ಅಸಡ್ಡೆಯನ್ನು ತೋರಿಸುವುದು ಸರಿಯಲ್ಲ. ಬದಲಾಗಿ ಹೆಣ್ಣು ಎನ್ನುವ ಖುಷಿಯನ್ನು ತಾವು ಮೊದಲು ಅನುಭವಿಸುವಂತಹ ಪರಿಪಾಠ ಬೆಳೆಸಿಕೊಳ್ಳಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನರಿಗೆ ಕೈಗೆಟಕುವ ದರದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಆರೋಗ್ಯ ಸೇವೆಯನ್ನು ಯುನೈಟೆಡ್ ಆಸ್ಪತ್ರೆಯ ಯುವ ವೈದ್ಯರ ತಂಡ ನೀಡುತ್ತಿದೆ ಎಂದು ಹೇಳಿದರು.
ಯುನೈಟೆಡ್ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ ಶಾಂತಕುಮಾರ್ ಮುರಡಾ ಮಾತನಾಡಿ, ಹಲವಾರು ಸಾವಿರ ರೂಪಾಯಿಗಳ ಮಹಿಳೆಯರ ಸಮಗ್ರ ಆರೋಗ್ಯ ತಪಾಸಣೆ ನಡೆಸುವ ವಿಶೇಷ ಆರೋಗ್ಯ ಪ್ಯಾಕೇಜನ್ನು ಕೇವಲ 390 ರೂಪಾಯಿಗೆ ನೀಡುತ್ತಿದ್ದಾರೆ. ಕ್ಯಾನ್ಸರ್, ಥೈರಾಯ್ಡ್, ಇಸಿಜಿ, ಅಲ್ಟ್ರಸೌಂಡ್ ಅಬ್ಡೋಮಿನ್ ಅಂಡ್ ಪೆಲ್ವಿಸ್, ಪ್ಯಾಪ್ ಸ್ಮೀಯರ್ ಹಾಗೂ ಗೈನಿ ಕನ್ಸ್‌ಲ್ಟೇಷನ್ ನ್ನು ಈ ಪ್ಯಾಕೇಜ್ ಒಳಗೊಂಡಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಎಲ್ಲಾ ವಿಭಾಗದ ಮಹಿಳೆಯರಿಗೂ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕ್ಲೀನಿಕಲ್ ಎಕ್ಸಲೆನ್ಸ್ ನಿರ್ದೇಶಕರಾದ ಡಾ. ರಾಜೀವ್ ಬಶೆಟ್ಟಿ, ಲೋರಿಯಾ ರಹಮಾನ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಪ್ಯಾಕೇಜ್‌ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ +91 80456 66666 ಗೆ ಸಂಪರ್ಕಿಸಲು ಕೋರಲಾಗಿದೆ.