ವಿಜಯಪುರ : ನಮ್ಮ ಅಡುಗೆ ನಮ್ಮ ಜವಾಬ್ದಾರಿ -೨೦೨೪ರ ಕಾರ್ಯಕ್ರಮಕ್ಕೆ ಚಾಲನೆ
ಗ್ಯಾಸ್ ಸಿಲಿಂಡರ್ ಬಳಸುವಾಗ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಜಾಗೃತಿ
ವಿಜಯಪುರ, ಡಿಸೆಂಬರ್ ೧ : ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುವಾಗ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ತಿಳುವಳಿಕೆ ಹೊಂದಿ, ಸುರಕ್ಷತೆ ಕಾಪಾಡಿಕೊಳ್ಳಬೇಕು ಎಂದು ಆಹಾರ ಇಲಾಖೆಯ ಉಪ ನಿರ್ದೇಶಕ ವಿನಯಕುಮಾರ ಪಾಟೀಲ ಹೇಳಿದರು.
ಭಾರತ ಸರ್ಕಾರದ ಪೆಟ್ರೋಲಿಯಂ ಮಂತ್ರಾಲಯ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಬಿಪಿಸಿಎಲ್ ಹಾಗೂ ಎಚ್ ಪಿಸಿಎಲ್ ಆಯಿಲ್ ಕಂಪನಿ ಗಳ ಸಹಯೋಗದಲ್ಲಿ ರವಿವಾರ ಹೊಟೇಲ್ ಮಧುವನ ಇಂಟರ್ ನ್ಯಾಷನಲ್ನಲ್ಲಿ ನಡೆದ ನಮ್ಮ ಅಡುಗೆ ನಮ್ಮ ಜವಾಬ್ದಾರಿ -೨೦೨೪ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ಯಾಸ್ ಬಳಸುವುದು ಪರಿಸರ ಸ್ನೇಹಿಯಾಗಿದೆ. ಇದರಿಂದ ಸಮಯ ಹಾಗೂ ಶ್ರಮ ಉಳಿತಾಯವಾಗುತ್ತದೆ. ಗ್ಯಾಸ್ ಸಿಲಿಂಡರ್ ಸ್ಟವ್ ಬಳಸುವಾಗ ಏನಾದರೂ ಸಣ್ಣ ಪುಟ್ಟ ತೊಂದರೆಗಳು ಕಂಡು ಬಂದರೆ ಸ್ವಯಂ ದುರಸ್ತಿಗೆ ಬದಲಿಗೆ ಗ್ಯಾಸ್ ಏಜೆನ್ಸಿ ಹಾಗೂ ಸಿಬ್ಬಂದಿಗೆ ಮಾಹಿತಿ ನೀಡಿ ಅದರ ದುರಸ್ತಿಗೆ ಕ್ರಮವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮೊದಲು ಮಹಿಳೆಯರಿಗಾಗಿ ಪಾಕ ಸ್ಪರ್ಧೆ ಏರ್ಪಡಿಸಲಾಯಿತು. ಸುಮಾರು ೨೨ ಜನ ಮಹಿಳೆಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಎಚ್.ಮಮದಾಪುರ ನಿರೂಪಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ, ಬಿಪಿಸಿಎಲ್ ಕಲಬುರಗಿ ವಿಭಾಗದ ಅಧಿಕಾರಿ ಆಶಿಶ್ ಅಗರವಾಲ್, ಆಹಾರ ಇಲಾಖೆಯ ವ್ಯವಸ್ಥಾಪಕ ಅಮರೇಶ ತಾಂಡೂರ್, ಬಬಲೇಶ್ವರದ ಗುರು ಶಾಂತೇಶ್ವರ ಭಾರತ್ ಗ್ಯಾಸ್ ವಿತರಕ ವೀರನಗೌಡ. ಎಸ್. ಪಾಟೀಲ ಸೇರಿದಂತೆ ಗ್ಯಾಸ್ ಏಜೆನ್ಸಿಯ ಮಾಲೀಕರು, ಸಿಬ್ಬಂದಿಗಳು, ಮಹಿಳೆಯರು ಪಾಲ್ಗೊಂಡಿದ್ದರು.