ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ
ನವರಸಪುರ ಕಾಲೊನಿಗಳಿಗೆ ನೀರು ಪೂರೈಕೆಗೆ ಚಾಲನೆ
ವಿಜಯಪುರ: ನಗರ ಮತಕ್ಷೇತ್ರದಲ್ಲಿ ಬರುವ ತೊರವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವರಸಪುರದ ವಿವಿಧ ಕಾಲೊನಿಗಳಿಗೆ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಮನೆ ಮನೆಗೆ ನೀರು ಪೂರೈಕೆಗೆ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಬುಧವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಜೆಜೆಎಂ ಯೋಜನೆಯಡಿ ಪ್ರತಿಯೊಂದು ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ ಕಾಮಗಾರಿ ಪೂರ್ಣಗೊಂಡು ಎರಡು ವರ್ಷಗಳಾದರೂ, ನೀರು ಸಂಪರ್ಕ ಕಲ್ಪಿಸದೇ ಇರುವುದರಿಂದ ಅಲ್ಲಿನ ನಿವಾಸಿಗಳಿಗೆ ಬಹಳ ತೊಂದರೆ ಉಂಟಾಗಿತ್ತು. ಈ ಸಮಸ್ಯೆ ಪರಿಹಾರಕ್ಕಾಗಿ ಕಳೆದ ವಿಧಾನಸಭೆ ಅಧಿವೇಶನದಲ್ಲಿ ಚುಕ್ಕೆ ರಹಿತ ಪ್ರಶ್ನೆ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು.
ಆಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯೊಂದಿಗೆ ಸಮನ್ವಯ ಸಾಧಿಸಿ, ಕೂಡಲೇ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳುವುದಾಗಿ ಲಿಖಿತ ಭರವಸೆ ನೀಡಿದ್ದರು. ಅದರಂತೆ ಈಗ ನೀರು ಸರಬರಾಜು ಮಾಡಲು ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದ್ದು, ಇನ್ನೂ ಮುಂದೆ ನವರಸಪುರದ ಎಲ್ಲ ಕಾಲೊನಿಗಳ ಪ್ರತಿ ಮನೆಗಳಿಗೆ ಶುದ್ಧ ನೀರು ಪೂರೈಕೆ ಆಗಲಿದೆ ಎಂದ ಅವರು, ಸಾರ್ವಜನಿಕರಿಗೆ ನೀರಿನ ತೊಂದರೆ ಆಗದಂತೆ ಸಮರ್ಪಕವಾಗಿ, ನೀರು ಬಿಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ ಗಚ್ಚಿನಮನಿ, ಸದಸ್ಯ ನಾಗೇಂದ್ರ ಯಾದವ, ಮುಖಂಡರಾದ ದಾದಾಸಾಹೇಬ ಬಾಗಾಯತ, ಸಂತೋಷ ಪಾಟೀಲ, ಅಡಿವೆಪ್ಪ ಸಾಲಗಲ್ಲ, ಸುನೀಲ ಚವ್ಹಾಣ, ಸುರೇಶ ಬಬಲೇಶ್ವರ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಎಂಜನಿಯರ್ ಎಸ್.ಗೋವಿಂದ್, ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ಗಳಾದ ರಾಮರಾವ್ ರಾಠೋಡ, ಪರ್ವತಪ್ಪ, ಪಿಡಿಓ ರಾಜೇಶ್ವರಿ ತುಂಗಳ ಮತ್ತಿತರರು ಇದ್ದರು.