ಯೋಜನೆಗಳು ಯಶಸ್ವಿಯಾಗಬೇಕಾದರೆ ಸಾರ್ವನಿಕರ ಸಹಕಾರ ಅಗತ್ಯ.
ಮುದ್ದೇಬಿಹಾಳ: ಸರ್ಕಾರದ ಯೋಜನೆ ಅಂದರೆ ಏನು ಬೇಕಾದರೂ ನಡೆಯುತ್ತೆ ಅನ್ನೋ ಮನೋಭಾವ ಹೋಗಬೇಕು. ಯೋಜನೆಗಳು ಯಶಸ್ವಿಯಾಗಬೇಕಾದರೆ ಸಾರ್ವನಿಕರ ಸಹಕಾರ ಅಗತ್ಯ. ಇಲಾಖೆಯವರು ಜನರೊಂದಿಗೆ ಸಮನ್ವಯತೆ ಸಾಧಿಸಬೇಕು. ಯೋಜನೆಗಳ ಸದುಪಯೋಗದ ಜವಾಬ್ಧಾರಿ ಜನರದ್ದಾಗಿರಬೇಕು ಎಂದು ಶಾಸಕ, ಕರ್ನಾಟಕ ಸಾಬೂನು, ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಹೇಳಿದರು.
ಇಲ್ಲಿನ ಪುರಸಭೆ ಎದುರು ವಿಜಯಪುರದ ಜಲಮಂಡಳಿ, ಪುರಸಭೆ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ಕೇಂದ್ರ ಪುರಸ್ಕೃತ ಅಮೃತ ೨.೦ ಯೋಜನೆಯಡಿ ಮುದ್ದೇಬಿಹಾಳ ಪಟ್ಟಣಕ್ಕೆ ಕುಡಿಯುವ ನೀರು ವಿತರಣಾ ವ್ಯವಸ್ಥೆ ಕಲ್ಪಿಸುವ ೩೦ ಕೋಟಿ ಅನುದಾನದ ೨೪*೭ ಯೋಜನೆಯ ಹಂತ-೧ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹಲವು ವರ್ಷಗಳ ಹಿಂದೆ ಪಟ್ಟಣದ ಹೊಟೇಲುಗಳಲ್ಲಿ ಕೆರೆಯ ನೀರನ್ನು ಬಳಸುವ ಪರಿಸ್ಥಿತಿ ಇತ್ತು. ದೇಶಮುಖರು ಸಚಿವರಾಗಿದ್ದಾಗ ಕುಡಿಯುವ ನೀರಿನ ಯೋಜನೆ ಪ್ರಾರಂಭಿಸಿದರೂ ಪೂರ್ಣಗೊಳ್ಳಲಿಲ್ಲ. ಹಿಂದಿನ ದಿನಗಳಲ್ಲಿ ಲಕ್ಷಗಳ ಲೆಕ್ಕದಲ್ಲಿ ಮೊದಲನೇ ಹಂತ ಜಾರಿಗೊಂಡಿತು. ಈಗ ಯೋಜನಾ ವೆಚ್ಚ ಕೋಟಿ ಲೆಕ್ಕಕ್ಕೇರಿದೆ. ೨ನೇ ಹಂತದ ೨೪*೭ ಯೋಜನೆಗೆ ೩೦ ಕೋಟಿ ಸಿಕ್ಕಿದ್ದು ಇನ್ನೂ ೧೭.೪೫ ಕೋಟಿ ಸಿಗಲಿದೆ. ೩ನೇ ಹಂತಕ್ಕಾಗಿ ೧೫ ಕೋಟಿ ಕೇಳಿದ್ದೇವೆ. ಒಟ್ಟಾರೆ ಕುಡಿಯುವ ನೀರಿಗಾಗಿ ಪಟ್ಟಣಕ್ಕೆ ೫೩-೫೮ ಕೋಟಿ ಅನುದಾನ ಬಳಕೆಯಾಗಲಿದೆ ಎಂದರು.
ಮುದ್ದೇಬಿಹಾಳ ಪಟ್ಟಣ ಜಿಲ್ಲೆಯಲ್ಲೇ ವೇಗವಾಗಿ ಬೆಳೆಯುತ್ತಿದ್ದು ನಗರವಾಗಿ ಗುರ್ತಿಸಿಕೊಳ್ಳುವುದರಿಂದ ಈಗಿರುವ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ. ಅಕ್ಕಪಕ್ಕದ ಶಿರೋಳ, ಮುದ್ನಾಳ, ಹಡಲಗೇರಿ ಇನ್ನಿತರ ಹಳ್ಳಿಗಳನ್ನು ಸೇರಿಸಿಕೊಳ್ಳಲಿದ್ದೇವೆ ಎಂದರು.
ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಮಾತನಾಡಿ ಗುತ್ತಿಗೆದಾರರು ರಸ್ತೆ ವಿರೂಪಗೊಳಿಸದೆ ಕೆಲಸ ಮಾಡಬೇಕು. ರಸ್ತೆ ಅಗೆಯುವ ಅವಶ್ಯಕತೆ ಎದುರಾದಲ್ಲಿ ಮತ್ತೇ ಮೊದಲಿನಂತೆ ರಸ್ತೆ ದುರಸ್ತಿಗೊಳಿಸಬೇಕು ಎಂದರು.
ವಿಜಯಪುರದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರ ಗೋವಿಂದ ಎಸ್ ಅವರು ಮಾತನಾಡಿ ಈಗಿನ ಕೆಲಸವನ್ನು ಸಿವೆಟ್ ಕಂಪನಿ ಗುತ್ತಿಗೆ ಹಿಡಿದಿದ್ದು ಕೆಲಸ ಪೂರ್ಣಗೊಳಿಸಲು ೧೮ ತಿಂಗಳ ಕಾಲಾವಧಿ ಇದೆ. ಪ್ರತಿ ಮನೆಯ ನಲ್ಲಿಗೆ ಮೀಟರ್ ಕೂಡಿಸಿ ನೀರು ಹರಿಸಲಾಗುತ್ತದೆ. ಮಂಡಳಿಯೇ ಅದನ್ನು ನಿರ್ವಹಣೆ ಮಾಡುತ್ತದೆ ಎಂದು ಯೋಜನೆಯ ಸ್ಥೂಲ ಪರಿಚಯ ಮಾಡಿಕೊಟ್ಟರು.
ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯಕಮಕ್ಕಳ, ಗಣ್ಯರಾದ ಸಿ.ಪಿ.ಸಜ್ಜನ, ಸತೀಶಕುಮಾರ ಓಸ್ವಾಲ್, ಸಿ.ಎಲ್.ಬಿರಾದಾರ, ಗುರುಲಿಂಗಪ್ಪಗೌಡ ಪಾಟೀಲ, ಅಬ್ದುಲ್ಗಫೂರ ಮಕಾನದಾರ, ಗುರು ತಾರನಾಳ, ಕಾಮರಾಜ ಬಿರಾದಾರ, ಪ್ರಭುದೇವ ಕಲಬುರ್ಗಿ, ಪುರಸಭೆಯ ಚುನಾಯಿತ, ನಾಮನಿರ್ದೇಶಿತ ಸದಸ್ಯರು ವೇದಿಕೆಯಲ್ಲಿದ್ದರು. ಪಿಂಟು ಸಾಲಿಮನಿ ಸ್ವಾಗತಿಸಿದರು. ಶ್ರೀಶೈಲ ಹೂಗಾರ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದ ಕೊನೇ ಹಂತದಲ್ಲಿ ಶಾಸಕರು ದಿಢಿರ್ ಅಸ್ವಸ್ಥರಾದರು. ತಕ್ಷಣ ವೈದ್ಯರನ್ನು ಕರೆಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಸುಧಾರಿಸಿದ ನಂತರ ಕಾರ್ನಲ್ಲಿ ಹುಡ್ಕೋ ಸ್ವಗೃಹಕ್ಕೆ ಕರೆದೊಯ್ಯಲಾಯಿತು. ಶಾಸಕರು ಬುಧವಾರ ಅಯ್ಯನಗುಡಿ ಉತ್ಸವದ ಹೋಮ ಹವನದಲ್ಲಿ, ರಾತ್ರಿ ಒಂದೂವರೆ ಗಂಟೆಯವರೆಗೂ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರಿಂದ ವಿಶ್ರಾಂತಿ ಇಲ್ಲದೆ ಹೀಗಾಗಿದೆ ಎಂದು ಶಾಸಕರ ಆಪ್ತರು ತಿಳಿಸಿದರು.
ಇದಕ್ಕೂ ಮುನ್ನ ಮಾಧ್ಯಮದವರು ಶಾಸಕರ ಬಳಿ ತೆರಳಿ ೩೦ ಕೋಟಿ ಕಾಮಗಾರಿಯ ಭೂಮಿಪೂಜಾ ಕಾರ್ಯಕ್ರಮಕ್ಕೆ ಮಾಧ್ಯಮದವರನ್ನು ಆಹ್ವಾನಿಸುವಲ್ಲಿ, ಆಮಂತ್ರಣ ಪತ್ರಿಕೆ ನೀಡುವಲ್ಲಿ ನಿರ್ಲಕ್ಷö್ಯ ತೋರಿದ ಅಧಿಕಾರಿಗಳ ನಡವಳಿಕೆಯನ್ನು ಖಂಡಿಸಿದರು. ಇದರಿಂದ ಅಸಮಾಧಾನಗೊಂಡ ಶಾಸಕರು ಸಂಬಂಧಿಸಿದ ಅಧಿಕಾರಿಗಳನ್ನು ಕರೆದು ತರಾಟೆಗೆ ತೆಗೆದುಕೊಂಡರು. ಇನ್ನೊಮ್ಮೆ ಇಂಥ ಲೋಪ ನಡೆಯದಂತೆ ನೋಡಿಕೊಳ್ಳುವುದಾಗಿ ತಿಳಿಸಿ ಘಟನೆಗೆ ವಿಷಾಧಿಸಿದರು. ಕಾರ್ಯಕ್ರಮದಲ್ಲಿ ಜನರ ಕೊರತೆ ಕಂಡು ಶಾಸಕರು ಅಧಿಕಾರಿಗಳ ವೈಫಲ್ಯವನ್ನೂ ಟೀಕಿಸಿದರು.