ಸಮಾಜದ ಸ್ವಾಸ್ಥ್ಯವೇ ಬಂಥನಾಳ ಶ್ರೀಗಳ ಧ್ಯೇಯ-
ಸಂತೋಷ ಬಂಡೆ
ವಿಜಯಪುರ: ದೇಹದ ಆರೋಗ್ಯಕ್ಕಿಂತ ಸಮಾಜದ ಆರೋಗ್ಯವೇ ಮುಖ್ಯ ಎಂದರಿತ ಬಂಥನಾಳ ಶ್ರೀಗಳು
ಶೈಕ್ಷಣಿಕ ಕ್ರಾಂತಿ ಮಾಡಿ, ಮಠಗಳ ಮೂಲಕ ರಾಷ್ಟ್ರಾಭಿಮಾನ ಹೆಚ್ಚಿಸಿದ ಧೀರ ಸನ್ಯಾಸಿಯಾಗಿದ್ದರು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ನಗರದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಯುವ ಘಟಕದ ವತಿಯಿಂದ ಪರಿಷತ್ತಿನ ಕಚೇರಿಯಲ್ಲಿ ಹಮ್ಮಿಕೊಂಡ ಬಂಥನಾಳ ಸಂಗನಬಸವ ಶಿವಯೋಗಿಗಳ ಜಯಂತಿ ಆಚರಣೆಯನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳೇ ದೇವರು, ವಿದ್ಯಾಲಯವೇ ದೇವಾಲಯ ಎಂಬ ಮಂತ್ರ ಪಠಣದೊಂದಿಗೆ ಭಕ್ತರು ಕೊಟ್ಟ ಕಾಣಿಕೆಯಲ್ಲೇ ಬಡ ಮಕ್ಕಳ ಅಕ್ಷರ ದಾಹ ನೀಗಿಸಿದ ಸಂತರಿವರು. ನಾಡಿನೆಲ್ಲೆಡೆ ವಿದ್ಯಾಕೇಂದ್ರಗಳನ್ನು ಸ್ಥಾಪಿಸಿ, ಶೈಕ್ಷಣಿಕ ಕ್ರಾಂತಿ ಮಾಡಿದ ಶ್ರೀಗಳು, ಬಡ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದರು ಎಂದು ಹೇಳಿದರು.
ಶಿಕ್ಷಕ ಈರಣ್ಣ ಬಿರಾದಾರ ಮಾತನಾಡಿ, ಪ್ರವಚನದ ಮೂಲಕ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಲವು ಕಾರ್ಯಕ್ರಮಗಳ ಮೂಲಕ ಶೈಕ್ಷಣಿಕವಾಗಿ ಬರಡಾಗಿದ್ದ ವಿಜಯಪುರ ಜಿಲ್ಲೆಯನ್ನು ಶಿಕ್ಷಣದ ತವರೂರನ್ನಾಗಿಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ ಎಂದು ಹೇಳಿದರು.
ಯುವ ಘಟಕದ ಅಧ್ಯಕ್ಷ ಅಮರೇಶ ಸಾಲಕ್ಕಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಕ್ಷರ ದಾಸೋಹಿ ಬಂಥನಾಳದ ಶ್ರೀಗಳು ಎರಡನೇ ಬಸವಣ್ಣನಂತಿದ್ದರು. ಅವರು ತಮ್ಮ ಜೀವನದುದ್ದಕ್ಕೂ ಸರಳ ಜೀವನಕ್ಕೆ ಮಹತ್ವ ನೀಡುತ್ತಾ, ಎಲ್ಲ ಗ್ರಾಮಗಳಲ್ಲಿ ಶಿವಾನುಭವ ಮತ್ತು ಪ್ರವಚನ ಮಾಡಿ ಜನರಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರೀತಿ ಬೆಳೆಯುವಂತೆ ಮಾಡಿದರು ಎಂದರು.
ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ಅಧ್ಯಕ್ಷ ಸುನೀಲ ಜೈನಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಪಟ್ಟಣಶೆಟ್ಟಿ,ಅಭಿಷೇಕ ಬೀಳೂರ,ಸಂದೀಪ ತೋಳನೂರ,ಭೀರಲಿಂಗ ಕಕ್ಕೇರಿ, ಕಿರಣ ಗುಡ್ಡಾಪುರ,ನವೀನ ಕರ್ಜಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.