ವಿಶ್ವದ ಅತ್ಯಂತ ಶ್ರೇಷ್ಠ ಸಂವಿಧಾನ ನಮ್ಮದು..!
ಇಂಡಿ : ಭಾರತವು ಒಂದು ಸ್ವತಂತ್ರವಾದ ಸಾರ್ವಭೌಮ ರಾಷ್ಟ್ರ, ಇಲ್ಲಿ ನಾಗರಿಕರೇ ಅಧಿಕಾರದ ಮೂಲ. ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯವನ್ನು ಸಂವಿಧಾನ ದೊರಕಿಸಿಕೊಟ್ಟಿದೆ ಎಂದು ನಿವೃತ್ತಿ ಶಿಕ್ಷಕ ಅಬ್ದುಲ ರಜಾಕ ಕೋಕಣಿ ಹೇಳಿದರು.
ಪಟ್ಟಣದ ಮಾಡಲ್ ಪಬ್ಲಿಕ್ ಶಾಲೆಯಲ್ಲಿ ೭೫ ನೇ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಮಾತನಾಡಿದರು. ಸ್ವಾತಂತ್ರ್ಯ ನಂತರ ಶೈಕ್ಷಣಿಕ, ಆರ್ಥಿಕ ಪ್ರಗತಿಯ ನಿಟ್ಟಿನಲ್ಲಿ ಭೌಗೋಳಿಕವಾಗಿ ಭಿನ್ನವಾಗಿರುವ ನಮ್ಮ ದೇಶವನ್ನು ಏಕತೆಯಲ್ಲಿ ಇಡುವ ಉದ್ದೇಶದಿಂದ ಡಾ. ಬಿ ಆರ್ ಅಂಬೇಡ್ಕರ್ ಅವರು ಬಲಿಷ್ಠವಾದ ಸಂವಿಧಾನವನ್ನು ನಮಗೆ ನೀಡಿದ್ದಾರೆ. ಎಷ್ಟೋ ಮಂದಿ ಕಡು ಬಡತನದಲ್ಲಿ ಹುಟ್ಟಿದವರು ದೇಶದ ಉನ್ನತ ಹುದ್ದೆಯನ್ನು ಅಲಂಕರಿಸಿದ ಕೀರ್ತಿ ನಮ್ಮ ದೇಶಕ್ಕಿದೆ. ಇವೆಲ್ಲವೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು
ಪುರಸಭೆಯ ಮಾಜಿ ಸದಸ್ಯ ಅಪ್ಪು ಬಾಗವಾನ ಮಾತನಾಡಿ ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಹಾಗೂ ಉಪಾಸನೆಯ ಸ್ವಾತಂತ್ರ್ಯವನ್ನು ನೀಡಿದೆ. ಸರ್ವರಿಗೂ ಸಮಾನ ಅವಕಾಶಗಳನ್ನು, ಸ್ಥಾನಮಾನಗಳನ್ನು ಕಲ್ಪಿಸಿದೆ. ವ್ಯಕ್ತಿ ಗೌರವ ಮತ್ತು ಸಹೋದರತೆಯನ್ನು ಬೆಳೆಸಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕೂಡ ತಲೆ ಎತ್ತಿ ನಡೆಯುವಂತೆ ಮಾಡಿದೆ. ನಾಲ್ಕು ಗೋಡೆಯ ಮಧ್ಯದಲ್ಲಿ ಜೀವಿಸಬೇಕಾಗಿದ್ದ ಸ್ತ್ರೀಯರನ್ನು ರಾಷ್ಟ್ರಪತಿ ಆಗುವಂಥ ಅವಕಾಶವನ್ನು ಸಂವಿಧಾನ ಕಲ್ಪಿಸಿದೆ. ರಾಷ್ಟ್ರದ ಏಕತೆಯನ್ನು ಹಾಗೂ ಸಮಗ್ರತೆಯನ್ನು ಸಂವಿಧಾನ ಕಾಪಾಡಿದೆ. ಇಂಥಹ ಸಂವಿಧಾನವನ್ನು ವಿಶ್ವದ ಅತ್ಯಂತ ಶ್ರೇಷ್ಠ ಸಂವಿಧಾನ ಎಂದು ಬಣ್ಣಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಫ್ತಿ ಅಬ್ದುಲ ರಹೇಮಾನ ಅರಬ ವಹಿಸಿದರು. ಹಾಫೀಜ ಸದ್ದಾಂ ಶೇಖ್, ಸಮಾಜ ಸೇವಕ ಹಸನ ಮುಜಾವರ, ಮೈಬೂಬ ಮೈದರಗಿ, ಅಶಫಾಕ ನಾಯಿಕೋಡಿ, ಸಲೀಮ ಮುಜಾವರ, ಶಾಲೆಯ ಮುಖ್ಯಗುರುಗಳಾದ ರಫೀಕ ಮುಲ್ಲಾ, ಸಲಾವುದ್ದಿನ ನಾಗುರ, ಮೂಜೀಬ ಅಫಜಲಪೂರ, ನಾಸೀರ ಇನಾಮದಾರ, ಮುನ್ನಾ ಇಂಡಿಕರ, ನಬಿರಸೂರ ಬಾಗವಾನ ಸೇರಿದಂತೆ ಇತರರು ಇದ್ದರು.