ಅತಿಸಾರ ಭೇದಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡಿ – ಜಿ.ಪಂ. ಸಿಇಓ ರಿಷಿ ಆನಂದ
ವಿಜಯಪುರ, ಅತಿಸಾರ ಭೇದಿಯನ್ನು ತಡೆಯಲು ಮುಖ್ಯ ಆರೋಗ್ಯಕರವಾದ ಅಭ್ಯಾಸಗಳನ್ನು ರೂಡಿಸಿಕೊಳ್ಳುವ ಮೂಲಕ ಮಕ್ಕಳು ಆರೋಗ್ಯ ಕಾಪಾಡಿಕೊಳ್ಳಬೇಕು ಹಾಗೂ ಅತಿಸಾರ ಭೇದಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಿಷಿ ಆನಂದ ಅವರು ಹೇಳಿದರು. ಅವರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಜೂನ್.೧೬ ರಂದು ವಿಜಯಪುರ ನಗರದ ಸರಕಾರಿ ಮರಾಠಿ ಗಂಡು ಮಕ್ಕಳ ಶಾಲೆಯಲ್ಲಿ ತೀವ್ರತರ ಅತಿಸಾರ ಭೇದಿ ನಿಯಂತ್ರಣಾ ಪಾಕ್ಷಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆರೋಗ್ಯ ಇಲಾಖೆಯ ಮೂಲಕ ಅತಿಸಾರ ಭೇದಿ ನಿಯಂತ್ರಣಾ ಪಾಕ್ಷಿಕ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು. ಬೇಸಿಗೆ ಹಾಗೂ ಮಳೆಗಾಲದಲ್ಲಿ ಹೆಚ್ಚಾಗಿ ಅತಿಸಾರ ಭೇದಿ ರೋಗದಿಂದ ಬಳಲುವ ಮಕ್ಕಳನ್ನು ಕಾಣಬಹುದಾಗಿದೆ. ಇಂತಹ ಸಂದರ್ಭಗಳಲ್ಲಿ ಪೋಷಕರು ನಿರ್ಲಕ್ಷö್ಯ ಮಾಡಬಾರದು. ಕೂಡಲೇ ವೈದ್ಯರನ್ನು ಭೇಟಿ ಮಾಡಿ ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಸಂಪತ್ ಗುಣಾರಿ ಅವರು ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಣ ಇಲಾಖೆಯ ಶಿಕ್ಷಕರು ಮತ್ತು ವಿವಿಧ ಇಲಾಖೆಯ ಮೂಲಕ ಅತಿಸಾರ ಭೇದಿ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಮಕ್ಕಳಲ್ಲಿ ಅತಿಸಾರ ಭೇದಿ ಲಕ್ಷಣಗಳು ಕಂಡು ಬಂದರೆ ಸಮೀಪದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಹೇಳಿದರು.
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಪರಶುರಾಮ ಹಿಟ್ನಳ್ಳಿ ಅವರು ಮಾತನಾಡಿ, ಅತಿಸಾರ ಭೇದಿಗೆ ಪರಿಹಾರವಾಗಿ ವೈದ್ಯರ ಮಾರ್ಗದರ್ಶನದಲ್ಲಿ ಓ.ಆರ್.ಎಸ್ ಮತ್ತು ಜಿಂಕ್ ಮಾತ್ರೆಗಳನ್ನು ಸೇವಿಸುವುದರಿಂದ ಅತೀಸಾರ ಭೇದಿಯ ಪರಿಣಾಮ ದೇಹದಲ್ಲಿ ಉಂಟಾಗುವ ನಿರ್ಜಲೀಕರಣವನ್ನು ನಿಯಂತ್ರಿಸುತ್ತದೆ. ಇಂತಹ ಸಮಸ್ಯೆಗಳು ಬರದಂತೆ ತಡೆಯಲು ಶುದ್ಧ ಕುಡಿಯುವ ನೀರು, ಆಗಾಗ ಕೈಗಳನ್ನು ಶುಚಿತ್ವಗೊಳಿಸುವುದು, ಸ್ವಚ್ಛ ಶೌಚಾಲಯಗಳ ಉಪಯೋಗ, ಸುತ್ತ-ಮುತ್ತಲಿನ ಪರಿಸರ ಸ್ವಚ್ಛತೆ ಇತ್ಯಾದಿ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆ ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಕಲಿಸಬೇಕು. ಜೊತೆಗೆ ಕಾಲ-ಕಾಲಕ್ಕೆ ಲಸಿಕೆಗಳನ್ನು ಹಾಕಿಸುವುದು, ಪೌಷ್ಠಿಕ ಆಹಾರ ಸೇವನೆ ಹಾಗೂ ಸಮರ್ಪಕವಾಗಿ ತಾಯಿ ಹಾಲು ಉಣಿಸುವುದರಿಂದ ಮಕ್ಕಳಲ್ಲಿ ಅತೀಸಾರ ಭೇದಿಯನ್ನು ತಡೆಗಟ್ಟಬಹುದು ಎಂದರು.
ಈ ಸಂದರ್ಭದಲ್ಲಿ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆ ವಾರ್ಡ ನಂ-೦೭ರ ಮುಖ್ಯ ಗುರುಗಳಾದ ಸುರೇಶ ಶಿರಶ್ಯಾಡ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ರೇಷ್ಮಾ ದಶವಂತ, ಡಿ.ಪಿ.ಎಮ್ ಮಾಹಾದೇವ ನಿಲಂಗಿ, ಆರ್.ಕೆ.ಎಸ್.ಕೆ ಜಿಲ್ಲಾ ಸಂಯೋಜಕರಾದ ಸಾವಿತ್ರಿ ಹಿಪ್ಪಿರಗಿ, ನಗರ ಆರೋಗ್ಯ ಕೇಂದ್ರ ದರ್ಗಾದ ಸಿಬ್ಬಂದಿ ವರ್ಗದವರು ಮತ್ತು ಸರಕಾರಿ ಮರಾಠಿ ಗಂಡು ಮಕ್ಕಳ ಶಾಲೆ ಮುಖ್ಯ ಗುರುಗಳು ಮತ್ತು ಶಿಕ್ಷಕರು, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಬೆಳಗಾವಿಯ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಿ.ಜೆ.ಡಿ ಸುರೇಶ ಹೊಸಮನಿ ಹಾಗೂ ಇತರರು ಉಪಸ್ಥಿತರಿದ್ದರು.



















