ಜನಸಂಖ್ಯೆ ಹೆಚ್ಚಳ ಅಭಿವೃದ್ಧಿಗೆ ಮಾರಕ-ಸಂತೋಷ ಬಂಡೆ
ಇಂಡಿ: ಜನಸಂಖ್ಯೆ ಹೆಚ್ಚಳದಿಂದ ಮೂಲ ಸೌಲಭ್ಯಗಳ ಕೊರತೆ, ಶಿಕ್ಷಣ-ಆರೋಗ್ಯ-ನೈರ್ಮಲ್ಯ ಸೇವೆಗಳ ಅಲಭ್ಯತೆ, ಅಪೌಷ್ಟಿಕತೆ, ನಿರುದ್ಯೋಗದಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪ್ರಜ್ಞಾವಂತರು ಜಾಗೃತಿ ಮೂಡಿಸಲು ವ್ಯಾಪಕವಾಗಿ ಶ್ರಮಿಸಬೇಕೆಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನದ ನಿಮಿತ್ತ ಹಮ್ಮಿಕೊಂಡ ‘ಜನಸಂಖ್ಯೆ ನಿಯಂತ್ರಣದಲ್ಲಿ ಶಿಕ್ಷಣದ ಪಾತ್ರ’ ಕುರಿತ ಚರ್ಚಾಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಬಡತನ ಮತ್ತು ಜನಸಂಖ್ಯೆಯ ನಡುವೆ ನೇರ ಸಂಬಂಧವಿದೆ. ಶಿಕ್ಷಣದಿಂದ ಜನರ ಜೀವನಮಟ್ಟ ಹೆಚ್ಚಿಸಿ, ಮಿತ ಸಂತಾನದ ಅರಿವನ್ನು ತೀವ್ರಗೊಳಿಸಬೇಕಾಗಿದೆ ಎಂದು ಹೇಳಿದರು.
ದೇಶದಲ್ಲಿ 1951ರಲ್ಲಿ ಕೇವಲ 36 ಕೋಟಿ ಇದ್ದ ಜನಸಂಖ್ಯೆ 2011ರಲ್ಲಿ 121 ಕೋಟಿ ಆಗಿದೆ. ಪ್ರತಿ ವರ್ಷ 1.81 ಕೋಟಿ ಜನ ಸೇರ್ಪಡೆಯಾಗುತ್ತಿದ್ದಾರೆ. ರಾಜ್ಯದಲ್ಲಿ 1951ರಲ್ಲಿ 1.94 ಕೋಟಿ ಇದ್ದ ಜನಸಂಖ್ಯೆ 2011ರಲ್ಲಿ 6.11 ಕೋಟಿಯಾಗಿದೆ. ಪ್ರತಿ ವರ್ಷ 8.40 ಲಕ್ಷ ಜನ ಹೆಚ್ಚಾಗಿ ಸೇರ್ಪಡೆಯಾಗುತ್ತಿದ್ದಾರೆ. ಇದೇ ವೇಗದಲ್ಲಿ ಜನಸಂಖ್ಯೆ ಬೆಳೆದರೆ ಬಡತನ, ಅನಕ್ಷರತೆ, ಅಜ್ಞಾನ, ಅನಾರೋಗ್ಯ, ಅತ್ಯಾಚಾರ, ಅಸುರಕ್ಷಿತ ಜೀವನ ಶೈಲಿ ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ವಿಜ್ಞಾನ, ತಂತ್ರಜ್ಞಾನದಲ್ಲಿ ನಾವು ಕ್ರಾಂತಿ ಮಾಡಿದರೂ, ಜನಸಂಖ್ಯೆ ನಿರೀಕ್ಷಿತ ಮಟ್ಟದಲ್ಲಿ ನಿಯಂತ್ರಣಕ್ಕೆ ಬರುತ್ತಿಲ್ಲ. ಪ್ರಜ್ಞಾವಂತರು ವ್ಯವಸ್ಥಿತ ಮತ್ತು ಸುಖಿ ಸಮಾಜದ ಚಿತ್ರಣ ನೀಡಿ ಜನಸಂಖ್ಯೆ ಹೆಚ್ಚಳ ತಡೆಯಲು ಕೈಜೋಡಿಸಬೇಕು ಎಂದು ಕೋರಿದರು.
ಮುಖ್ಯ ಶಿಕ್ಷಕ ಎ ಎಂ ಬೆದ್ರೇಕರ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಶಿಕ್ಷಕಿ ಎನ್ ಬಿ ಚೌಧರಿ ಸ್ವಾಗತಿಸಿ, ನಿರೂಪಿಸಿದರು. ಎಸ್ ಪಿ ಪೂಜಾರಿ ವಂದಿಸಿದರು. ತೈಸಿನ್ ನದಾಫ್ ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು.