ರಾಯಚೂರು : ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಣ ಶುಲ್ಕ,ಹಾಗೂ ಡೊನೇಷನ್ ಹಾವಳಿಯಿಂದ ಪಾಲಕರು ತತ್ತರಿಸಿಹೋಗಿದ್ದು, ಇದರ ನಿಯಂತ್ರಣಕ್ಕೆ ಸಮಿತಿಯನ್ನು ರಚಿಸಬೇಕು ಎಂದು ಕರ್ನಾಟಕ ರೈತ ಸಂಘದ ರಾಜ್ಯ ಮಹಿಳಾ ಅಧ್ಯಕ್ಷ ಮೈನಾವತಿ ಒತ್ತಾಯಿಸಿದರು.
ನಗರದ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಜಿಲ್ಲೆಯ ಖಾಸಗಿ ಸಂಸ್ಥೆಗಳು ಶಾಲಾ ಕಾಲೇಜುಗಳನ್ನು ಸ್ಥಾಪಿಸಿಕೊಂಡು, ಉತ್ತಮ ಶಿಕ್ಷಣ,ಕುಡಿಯುವ ನೀರು, ಗ್ರಂಥಾಲಯ, ಕ್ರೀಡಾಂಗಣ, ಕ್ರೀಡೆಗಳು, ಶೌಚಾಲಯ, ಆಡಿಟೋರಿಯಂ, ವಟ್ಯೂಷನ್, ಕೋಚಿಂಗ್, ಎಂದು ಹಲವಾರು ರೀತಿಯ ವ್ಯವಸ್ಥೆಗಳನ್ನು ಒದಗಿಸುತ್ತೇವೆ ಎಂದು ಹೇಳಿಕೊಂಡು ಸಾರ್ವಜನಿಕರಲ್ಲಿ ಹಣವನ್ನು ವಸೂಲಿ ಮಾಡಿ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ.
ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ಮಾರಾಟಕ್ಕೆ ಇಟ್ಟಿದ್ದಾರೆ ಎಂದು ಆರೋಪಿಸಿದರು. ಬಡವರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತೇವೆ ಎಂದು ಸ್ಥಾಪಿತವಾಗಿರುವ ಶಿಕ್ಷಣ ಸಂಸ್ಥೆಗಳು ಬಂಡವಾಳಶಾಹಿ ಶಿಕ್ಷಣ ಸಂಸ್ಥೆಗಳು ಆಗಿ ಮಾರ್ಪಟ್ಟಿವೆ. ಶಿಕ್ಷಣ ಶುಲ್ಕದ ಹೆಸರು ಹೇಳಿಕೊಂಡು ಮಕ್ಕಳನ್ನು ,ಪಾಲಕರನ್ನು ಶೋಷಣೆ ಮಾಡುವ ಕೆಲಸ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ. ಅತೀ ಹೆಚ್ಚು ಶಿಕ್ಷಣ ಸಂಸ್ಥೆಗಳಲ್ಲಿ ಅರ್ಹತೆಯನ್ನು ಹೊಂದಿರದೆ ಇರುವ ಶಿಕ್ಷಕರನ್ನು ನೇಮಿಸಿಕೊಂಡು ಶಿಕ್ಷಣ ಒದಗಿಸುತ್ತಿವೆ.
ಗ್ರಾಮೀಣ ಭಾಗದ ರೈತರ, ಕೂಲಿ ಕಾರ್ಮಿಕರ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿ ಉತ್ತಮ ಶಿಕ್ಷಣವನ್ನು ಜೋಡಿಸಬೇಕು ಎಂಬ ಉದ್ದೇಶದಿಂದ ಕಷ್ಟ ಪಟ್ಟು ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲಾ ಕಾಲೇಜುಗಳಿಗೆ ಸೇರಿಸಿದರೆ ಒಂದರ ಮೇಲೊಂದು ಶುಲ್ಕವನ್ನು ವಿಧಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಶಾಲಾ ಕಾಲೇಜುಗಳು ನಿಗದಿತ ಶುಲ್ಕದಲ್ಲಿ ಶೇಕಡ 15 % ಕಡಿತ ಮಾಡಬೇಕು ಎಂದು ಅದೇಶವನ್ನು ಹೊರಡಿಸಿದ್ದರೂ ಶಿಕ್ಷಣ ಸಂಸ್ಥೆಗಳು ಸುಪ್ರೀಂ ಕೋರ್ಟಿನ ಆದೇಶವನ್ನು ನಿರ್ಲಕ್ಷಿಸಿ ಮನಬಂದಂತೆ ಶುಲ್ಕವನ್ನು ವಿಧಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಈ ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕವನ್ನು ಕಡಿಮೆ ಮಾಡಲು ಡೊನೇಷನ್ ಹಾವಳಿ ನಿಯಂತ್ರಣ ಸಮಿತಿಯನ್ನು ರಚಿಸಿ ರೈತರ, ಬಡ ಕೂಲಿ ಕಾರ್ಮಿಕರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವೆಂಕಟೇಶ್ ಮಲ್ಲೇ ದೇವರಗುಡ್ಡ, ಸುವರ್ಣ, ಮಲ್ಲನಗೌಡ ಉಪಸ್ಥಿತರಿದ್ದರು.