ನರೇಗಾ ಕೂಲಿಕಾರ್ಮಿಕರಿಗೆ ನಿರಂತರವಾಗಿ ಉದ್ಯೋಗ ಕಲ್ಪಿಸಲಾಗುತ್ತಿದೆ
ವಿಜಯಪುರ, ಮೇ.೧೪ : ಜಿಲ್ಲೆಯಲ್ಲಿ ಬೇಸಿಗೆಯ ಸಂದರ್ಭದಲ್ಲೂ ಗ್ರಾಮೀಣ ಪ್ರದೇಶದ ಅನೇಕ ಕುಟುಂಬಗಳಿಗೆ ಜೀವನ ನಿರ್ವಹಣೆಗಾಗಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸ್ಥಳೀಯವಾಗಿ ಅಕುಶಲ ಕೆಲಸ ಒದಗಿಸಲಾಗುತ್ತಿದೆ. ಗುರಿ ಹೊಂದಿದ ಮಾನವ ದಿನಗಳನ್ನು ಸೃಜಿಸಲು ಗ್ರಾಮ ಪಂಚಾಯತಿ ಕ್ರಿಯಾ ಯೋಜನೆಗಳನ್ನು ಈಗಾಗಲೇ ಅನುಮೋದಿಸಲಾಗಿದೆ. ಅನುಮೋದನೆಯಾದ ಕಾಮಗಾರಿಗಳಲ್ಲಿನ ಸಮುದಾಯ ಹಾಗೂ ಕೂಲಿ ಆಧಾರಿತ ಕಾಮಗಾರಿಗಳನ್ನು ಆರ್ಥಿಕ ವರ್ಷದ ಏಪ್ರಿಲ್, ಮೇ ಮತ್ತು ಜೂನ್ ಮಾಹೆಗಳಲ್ಲಿ ಅನುಷ್ಠಾನಗೊಳಿಸಲು ಅವಕಾಶ ನೀಡಲಾಗಿದೆ. ನರೇಗಾ ಕೂಲಿಕಾರ್ಮಿಕರಿಗೆ ನಿರಂತರವಾಗಿ ಉದ್ಯೋಗ ಕಲ್ಪಿಸಲಾಗುತ್ತಿದೆ. ಬೇಸಿಗೆ ಅವಧಿಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದವರಿಗೆ ಸತತವಾಗಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತಿ ಮೂಲಕ ದುಡಿಯೋಣ ಬಾ ಅಭಿಯಾನವನ್ನು ಹಮ್ಮಿಕೊಂಡು ಕಾರ್ಯಗತ – ಗೊಳಿಸಲಾಗುತ್ತಿದೆ.
ದುಡಿಯೋಣ ಬಾ ಅಭಿಯಾನದಡಿ ನರೇಗಾ ಯೋಜನೆಯ ಕುರಿತಾಗಿ ಜಿಲ್ಲೆಯಲ್ಲಿ ಈಗಾಗಲೇ ವ್ಯಾಪಕ ಪ್ರಚಾರವನ್ನು ಕೈಗೊಳ್ಳಲಾಗಿದೆ. ಮನೆ-ಮನೆ ಭೇಟಿ ನೀಡುವುದು, ಕೂಲಿಕಾರ್ಮಿಕರಿಂದ ಕೆಲಸಕ್ಕಾಗಿ ಬೇಡಿಕೆ ಪಡೆಯುವುದು, ಕಾಯಕ ಬಂಧುಗಳನ್ನು ಆಯ್ಕೆ ಮಾಡುವುದು, ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರ್ಮಿಕ ಸಂಘಟಿಸುವುದು, ವೈಯಕ್ತಿಕ ಕಾಮಗಾರಿಗಳು ಹಾಗೂ ಕೂಲಿ ಆಧಾರಿತ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಲು ಅವಕಾಶ, ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಯೋಜನೆ ಕುರಿತು ಅರಿವು ಮೂಡಿಸಿ ಮಹಿಳೆಯರನ್ನು ಹೆಚ್ಚಾಗಿ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಕ್ರಮವಹಿಸುವುದು, ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡ, ಭೂರಹಿತ ಕುಟುಂಬ, ಸಣ್ಣ ಮತ್ತು ಅತಿಸಣ್ಣ ರೈತರು, ವಿಶೇಷ ಚೇತನರು, ಮಹಿಳೆಯರೂ ಸೇರಿದಂತೆ ಹಿರಿಯ ನಾಗರಿಕರಿಗೂ ಸಹ ನರೇಗಾ ಯೋಜನೆಯಡಿ ಕೆಲಸ ಒದಗಿಸಲಾಗುವುದು.
ಒಂದು ಆರ್ಥಿಕ ವರ್ಷದಲ್ಲಿ ಒಂದು ಕುಟುಂಬಕ್ಕೆ ೧೦೦ ದಿನಗಳ ಉದ್ಯೋಗ ಪಡೆಯಲು ಅವಕಾಶವಿದೆ. ಪ್ರತಿ ದಿನಕ್ಕೆ ರೂ.೩೭೦ ಉದ್ಯೋಗ ದರ ಇದ್ದು, ವರ್ಷದಲ್ಲಿ ೧೦೦ ದಿನ ಕೆಲಸ ನಿರ್ವಹಿಸಿದ್ದಲ್ಲಿ ಒಟ್ಟು ರೂ.೩೭,೦೦೦ ಪಾವತಿಯಾಗುತ್ತದೆ. ಅಲ್ಲದೇ ಈ ಯೋಜನೆಯಡಿ ಪುರುಷ ಮತ್ತು ಮಹಿಳೆಯರಿಗೆ ಸಮಾನವಾಗಿ ಪಾವತಿಸಲಾಗುತ್ತಿದೆ.
ಕೃಷಿ ಭೂಮಿಯಲ್ಲಿ ಮಣ್ಣಿನ ಸವಕಳಿ ತಡೆದು ಫಲವತ್ತತೆ ಹೆಚ್ಚಿಸಲು ಕಂದಕ ಬದು ನಿರ್ಮಾಣ, ಕೃಷಿ ಹೊಂಡ ಕಾಮಗಾರಿಗಳ ಅನುಷ್ಟಾನ, ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕೆರೆಗೆ ನೀರು ಹರಿದು ಬರುವ ಕಾಲುವೆಗಳ ಪುನಶ್ಚೇತನ, ಕೆರೆ ಹೂಳು ತೆಗೆಯುವುದು, ಕೆರೆ ಏರಿ ಮತ್ತು ಕೋಡಿ ದುರಸ್ತಿ, ರೈತರ ಜಮೀನುಗಳಿಗೆ ನೀರು ಹರಿದು ಹೋಗುವ ಕಾಲುವೆಗಳ ಪುನಶ್ಚೇತನ ಮತ್ತು ಕೆರೆ ಅಂಚಿನಲ್ಲಿ ಅರಣ್ಯೀಕರಣ ಕಾಮಗಾರಿಗಳು, ಬತ್ತಿಹೋದ ಕುಡಿಯುವ ನೀರಿನ ಕೊಳವೆ ಬಾವಿಗಳ ಸುತ್ತ ಮಳೆ ನೀರು ಮರುಪೂರಣ ಘಟಕ ನಿರ್ಮಾಣ ಮತ್ತು ಸರ್ಕಾರಿ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಕಾಮಗಾರಿಗಳ ಅನುಷ್ಟಾನ, ರಸ್ತೆ ಬದಿ ನೆಡುತೋಪು, ನಾಲಾ ಹೂಳೆತ್ತುವುದು, ಬೋಲ್ಡರ್ ಚೆಕ್, ಬಸಿಗಾಲುವೆ ನಿರ್ಮಾಣ ಮತ್ತು ಇತರೆ ರೈತರ ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಟಾನ ಮಾಡಲಾಗುತ್ತಿದೆ.
ಮಹಿಳಾ ಭಾಗವಹಿಸುವಿಕೆ ಗುರಿ
ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯತಿಯಲ್ಲ್ಲಿ ಸ್ವ-ಸಹಾಯ ಸಂಘಗಳ ಸದಸ್ಯರನ್ನೊಳಗೊಂಡು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ ಮಹಿಳಾ ಭಾಗವಹಿಸುವಿಕೆ ಪ್ರಮಾಣವನ್ನು ಶೇ.೬೦ ರಷ್ಟು ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಜಿಲ್ಲೆಯ ಮಹಿಳಾ ಭಾಗವಹಿಸುವಿಕೆ ಪ್ರಗತಿಯನ್ನು ಶೇ.೫೮.೪೦ರಷ್ಟು ಸಾಧಿಸಲಾಗಿದೆ.
ಈಗಾಗಲೇ ಜಿಲ್ಲೆಯಲ್ಲಿ ಪ್ರತಿದಿನ ಸಾವಿರಾರು ಕೂಲಿಕಾರ್ಮಿಕರು ನರೇಗಾ ಯೋಜನೆಯಡಿ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದರಂತೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅವಶ್ಯಕತೆ ಇದ್ದವರಿಗೆ ನರೇಗಾ ಯೋಜನೆಯಡಿ ಕೆಲಸ ಒದಗಿಸಲಾಗುತ್ತಿದ್ದು, ಆ ಮೂಲಕ ಅವರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬೇಕು.
–ವಿಜಯಪುರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಎಲ್ಲ ಯೋಜನೆಗಳ ಮಾಹಿತಿಗಾಗಿ, ಏಕೀಕೃತ ಸಹಾಯವಾಣಿ ಸಂಖ್ಯೆ: ೮೨೭೭೫೦೬೦೦೦ ಹಾಗೂ ಜಿಲ್ಲಾ, ಪಂಚಾಯತಿಯ ನರೇಗಾ ಸಹಾಯವಾಣಿ ಸಂಖ್ಯೆ: +೯೧ ೯೪೮೦೮೩೧೬೯೯ ಗೆ ಸಂಪರ್ಕಿಸಬಹುದು ಮತ್ತು ತಮ್ಮ ಹತ್ತಿರದ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಪಂಚಾಯತಿಯ ಪ್ರಕಟಣೆ ತಿಳಿಸಿದೆ.