ಮುದ್ದೇಬಿಹಾಳ: ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರು ಶೀಘ್ರದಲ್ಲೇ ಲೋಕಾರ್ಪಣೆಗೊಳಿಸಲಿರುವ ಬಹು ನಿರೀಕ್ಷಿತ ದೇಶೀ ಹೈನುಗಾರಿಕೆ ಉದ್ಯಮದ ಪೂರ್ವ ತಯಾರಿಗಳನ್ನು, ಅಲ್ಲಿ ಸಾಕುತ್ತಿರುವ ವಿಶೇಷ ತಳಿಯ ಹೋರಿ ಕರುಗಳನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪಿ.ರಾಜೀವ ಅವರು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮಾರುತಿನಗರದ ಹೊರವಲಯದಲ್ಲಿರುವ ನಡಹಳ್ಳಿ ಫಾರ್ಮಹೌಸ್‌ಗೆ ಸೋಮವಾರ ಅನೌಪಚಾರಿಕ ಭೇಟಿ ನೀಡಿದ್ದ ಅವರು, ಹೈನುಗಾರಿಕೆ ರೈತರ, ಶ್ರಮಿಕರ ಬಲವರ್ಧನೆಗೆ ಪೂರಕವಾದ ಯೋಜನೆಯಾಗಿದೆ. ನಡಹಳ್ಳಿಯವರು ಹಲವಾರು ಉದ್ಯಮಗಳಲ್ಲಿ ಅಪಾರ ಅನುಭವ ಹೊಂದಿದವರಾಗಿದ್ದಾರೆ. ತಮ್ಮ ಭಾಗದ ರೈತರ ಜೀವನ ಮಟ್ಟ ಮೇಲ್ದರ್ಜೆಗೇರಿಸಲು, ಉದ್ಯೋಗ ಸೃಷ್ಟಿಗೆ ಅವಕಾಶ ಒದಗಿಸಲು ಅವರು ನಡೆಸುತ್ತಿರುವ ಪ್ರಯತ್ನಗಳು ಮಾದರಿಯಾಗಿವೆ. ಇವರ ಪ್ರಯತ್ನಗಳಿಗೆ ಜನ ಬೆಂಬಲವಾಗಿ ನಿಲ್ಲಬೇಕು ಎಂದರು. ತಮ್ಮ ಉದ್ಯಮದ ಕುರಿತು ಮಾಹಿತಿ ನೀಡಿದ ನಡಹಳ್ಳಿಯವರು ಮುದ್ದೇಬಿಹಾಳ ತಾಲೂಕು ಪೂರ್ವಕ್ಕೆ ನಾರಾಯಣಪುರ, ಪಶ್ಚಿಮಕ್ಕೆ ಆಲಮಟ್ಟಿ ಜಲಾಶಯಗಳನ್ನು ಹೊಂದಿದೆ. ಎರಡೂ ಜಲಾಶಯಗಳ ನಡುವಿನ ಕೃಷ್ಣಾ ನದಿಯ ಹಿನ್ನೀರು ಬಳಸಿಕೊಂಡು ಕೃಷಿ ಚಟುವಟಿಕೆ ನಡೆಸಲು ಸಾಕಷ್ಟು ಅವಕಾಶಗಳಿವೆ. ಕೃಷಿ ಚಟುವಟಿಕೆಯ ಭಾಗವಾಗಿ ಹೈನುಗಾರಿಕೆ ಹೆಮ್ಮರವಾಗಿ ಬೆಳೆಯಲು ನಿರ್ಧಿಷ್ಟ ಮತ್ತು ಪರಿಣಾಮಕಾರಿ ಯೋಜನೆ ರೂಪಿಸಬೇಕು. ಹೈನುಗಾರಿಕೆ ಮತ್ತು ಅದರ ಉಪ ಉತ್ಪನ್ನಗಳ ಪರಿಚಯವನ್ನು ಈ ಭಾಗದ ಜನರಿಗೆ ಮಾಡಿಸಿದರೆ ಸಾಕಷ್ಟು ರೈತರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳುವುದು ಸಾಧ್ಯವಿದೆ. ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದೇನೆ. ನಮ್ಮ ಉದ್ಯಮದ ಪ್ರಯೋಜನ ರೈತರಿಗೆ ಮತ್ತು ಜನಸಾಮಾನ್ಯರಿಗೆ ತಲುಪಿದರೆ ಅದೇ ನಮ್ಮ ಸಮಾಜ ಸೇವೆಯ ಸಾರ್ಥಕತೆ ಎನ್ನಿಸಿಕೊಳ್ಳುತ್ತದೆ ಎಂದರು. ಇದೇ ಸಂದರ್ಭ ಮೊದಲ ಬಾರಿ ಫಾರ್ಮಹೌಸ್‌ಗೆ ಭೇಟಿ ನೀಡಿದ್ದನ್ನು ಸ್ವಾಗತಿಸಿ ನಡಹಳ್ಳಿಯವರು ರಾಜೀವ ಅವರನ್ನು ಸನ್ಮಾನಿಸಿ ಗೌರವಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಶ್ರೀಶೈಲ ದೊಡಮನಿ ರೂಢಗಿ, ತಾಪಂ ಮಾಜಿ ಸದಸ್ಯ ಪ್ರೇಮಸಿಂಗ್ ಚವ್ಹಾಣ, ಅಶೋಕ ರಾಠೋಡ ನೇಬಗೇರಿ, ಗಿರೀಶಗೌಡ ಪಾಟೀಲ ಹಿರೇಮುರಾಳ, ಸಂಜು ಬಾಗೇವಾಡಿ, ವಿಜಯಕುಮಾರ ಬಡಿಗೇರ, ಗೌರಮ್ಮ ಹುನಗುಂದ, ಬಸವರಾಜ ಸರೂರ, ಅಪ್ಪು ಧನ್ನೂರ, ಅನೀಲ ರಾಠೋಡ, ಶಿವಾನಂದ ಲಮಾಣಿ, ನಾಗೇಶ ಕವಡಿಮಟ್ಟಿ, ಸೇರಿದಂತೆ ಉಪಸ್ಥಿತರಿದ್ದರು.
ನಡಹಳ್ಳಿ ಫಾರ್ಮಹೌಸ್‌ನಲ್ಲಿ ಸಿದ್ದಗೊಳ್ಳುತ್ತಿರುವ ಹೈನುಗಾರಿಕೆ ಉದ್ಯಮದ ವ್ಯವಸ್ಥೆಯನ್ನು ಪಿ.ರಾಜೀವ ಪರಿಶೀಲಿಸಿ ದೇಶೀ ತಳಿಯ ಹೋರಿ ಕರುವಿಗೆ ಮೇವು ತಿನ್ನಿಸಿದರು. ಗುರುಲಿಂಗಪ್ಪಗೌಡ ಅಂಗಡಿ, ಮುಖಂಡರು ಇದ್ದಾರೆ