ಮುದ್ದೇಬಿಹಾಳ:ಹುಡ್ಕೋ ಪಕ್ಕದ ಶಿರವಾಳ ಲೇಔಟ್‌ನ ಸಿಎ ಸೈಟ್‌ನಲ್ಲಿ ಅರ್ಧಕ್ಕೆ ನಿಂತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ.ದೇವರಾಜ ಅರಸು ಭವನ ಮತ್ತು ಬಿಸಿಎಂ ತಾಲೂಕು ಕಚೇರಿ ಕಟ್ಟಡದಲ್ಲಿ ಅಕ್ರಮ, ಅನೈತಿಕ ಚಟುವಟಿಕೆಗಳು ಹೆಚ್ಚಾಗಿದ್ದು ತಡೆಗಟ್ಟಲು ಸಂಬಂಧಿಸಿದ ಅಧಿಕಾರಿಗಳು, ಪೊಲೀಸರು ಕೂಡಲೇ ಕ್ರಮ ಕೈಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
೨೦೨೧ರಲ್ಲಿ ಈ ಕಟ್ಟಡ ನಿರ್ಮಾಣಕ್ಕೆ ಆಗ ಶಾಸಕರಾಗಿದ್ದ ಎ.ಎಸ್.ಪಾಟೀಲ ನಡಹಳ್ಳಿಯವರು ಸರ್ಕಾರದಿಂದ ಕೋಟಿ ರೂ ಅನುದಾನ ಮಂಜೂರು ಮಾಡಿಸಿದ್ದರು. ಕೆಆರ್‌ಐಡಿಎಲ್ (ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ ನಿಯಮಿತ, ಹಿಂದಿನ ಭೂಸೇನಾ ನಿಗಮ) ವತಿಯಿಂದ ಕಟ್ಟಡ ನಿರ್ಮಾಣಗೊಳ್ಳುತ್ತಿತ್ತು. ಆಗ ಬಿಡುಗಡೆಯಾದ ೫೦ ಲಕ್ಷ ರೂ ಅನುದಾನದಲ್ಲಿ ಕೆಳಗೆ ಡಿ ದೇವರಾಜ ಅರಸು ಸಮುದಾಯ ಭವನ, ಮೇಲೆ ಬಿಸಿಎಂ ತಾಲೂಕು ಕಚೇರಿ ಇರುವ ಎರಡಂತಸ್ತಿನ ಕಟ್ಟಡ ಪೂರ್ಣಗೊಳಿಸಿ ಕಿಟಕಿಗಳಿಗೆ ಗ್ರಿಲ್ ಅಳವಡಿಸಲಾಗಿದೆ.
ಆದರೆ ಬಾಗಿಲು ಅಳವಡಿಕೆ, ಪ್ಲಾಸ್ಟರಿಂಗ್, ಫ್ಲೋರಿಂಗ್ ಸೇರಿ ಅಂತಿಮ ಹಂತದ ಕಾಮಗಾರಿಗಳಿಗೆ ಇನ್ನುಳಿದ ಅನುದಾನ ಬಿಡುಗಡೆಯಾಗದ ಕಾರಣ ೨-೩ ವರ್ಷಗಳಿಂದ ಈ ಕಟ್ಟಡ ಬಿಜಾಪುರದ ಬಾರಾ ಕಮಾನ್‌ನಂತೆ ನಿಂತಿದೆ. ಇಟ್ಟಂಗಿ, ಸಿಮೆಂಟ್ ಗೋಡೆ ಅಲ್ಲಲ್ಲಿ ಹಾಳಾತಗೊಡಗಿದೆ. ಕಟ್ಟಡಕ್ಕೆ ಬಾಗಿಲುಗಳೇ ಇಲ್ಲದ್ದರಿಂದ ಇಡೀ ಕಟ್ಟಡ ಅನೈತಿಕ ಚಟುವಟಿಕೆಗಳಿಗೆ ಕಾನೂನುಬಾಹಿರವಾಗಿ ಬಳಕೆ ಆಗುತ್ತಿರುವುದು ಅಕ್ಕಪಕ್ಕದ ನಿವಾಸಿಗಳ ನಿದ್ದೆಗೆಡಿಸಿದಂತಾಗಿದೆ ಎಂದು ದೂರಿದ್ದಾರೆ.
ನೆಲ ಅಂತಸ್ತಿನಲ್ಲಿ ಗುಂಪು ಸೇರುವ ಪುಂಡರು ಬೀಯರ್, ವಿಸ್ಕಿ, ರಮ್ ಮುಂತಾದ ಮದ್ಯ ಸೇವನೆ ಮಾಡಿ ಖಾಲಿ ಬಾಟಲುಗಳನ್ನು, ತಿನ್ನುವ ಪದಾರ್ಥಗಳ ತ್ಯಾಜ್ಯವನ್ನು ಅಲ್ಲಿಯೇ ಬಿಸಾಕುತ್ತಾರೆ. ಅಮಲಿನಲ್ಲಿ ಕೆಲವೊಮ್ಮೆ ರಸ್ತೆಯಲ್ಲೇ ಬಾಟಲಿಗಳನ್ನು ಒಡೆಯುತ್ತಾರೆ. ಇದರಿಂದ ಗಾಜಿನ ಚೂರು ಅಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಹಾನಿ ಉಂಟು ಮಾಡಿದ್ದೂ ಇವೆ ಎಂದು ದೂರಿದ್ದಾರೆ.
ಮೊದಲ ಅಂತಸ್ತಿನಲ್ಲಿ ಕೊಠಡಿಗಳಿದ್ದು ಯಾವುದಕ್ಕೂ ಬಾಗಿಲು ಇಲ್ಲದ್ದರಿಂದ ಅನೈತಿಕ ಚಟುವಟಿಕೆಗಳು ಯಥೇಚ್ಚವಾಗಿ ನಡೆಯುತ್ತಿವೆ. ಕೊಠಡಿಯೊಂದರಲ್ಲಿ ನೆಲದ ಮೇಲೆ ರಟ್ಟಿನ ಹಾಸಿಗೆ ಹಾಸಿರುವುದು, ಪಕ್ಕದಲ್ಲೇ ಪ್ಲಾಸ್ಟಿಕ್ ಮ್ಯಾಟ್ ಇರುವುದು, ಅಲ್ಲಲ್ಲಿ ಬಳಸಿದ ನಿರೋಧಗಳಿರುವುದು, ಎಲ್ಲೆಂದರಲ್ಲಿ ಮಲ ಮೂತ್ರ ಮಾಡಿರುವುದು ಅನೈತಿಕತೆ ಎತ್ತಿ ತೋರಿಸುತ್ತದೆ ಎಂದು ಸಾರ್ವಜನಿಕರು ಕಿಡಿಕಾರಿದರು.
ಕೆಲ ವಿದ್ಯಾರ್ಥಿಗಳು ಕಾಲೇಜಿಗೆ ಕಾಲೇಜಿಗೆ ಹೋಗದೆ ಇಲ್ಲಿ ಬಂದು ಸಿಗರೇಟ್, ಗಾಂಜಾ ಇನ್ನಿತರ ಮಾದಕ ವಸ್ತು ಸೇವಿಸಿ ಸಂಜೆಯವರೆಗೂ ಸನೆಯಲ್ಲಿ ಕಾಲ ಕಳೆದು ನಸೆ ಇಳಿದ ನಂತರ ಹೋಗುತ್ತಾರೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೇಲ್ ಇದೆ. ಕಟ್ಟಡ ಪಕ್ಕದ ರಸ್ತೆಯಲ್ಲಿ ಹೆಣ್ಣುಮಕ್ಕಳು ತಿರುಗಾಡುತ್ತಾರೆ. ಪುಂಡರ ಹಾವಳಿಯಿಂದ ಅಲ್ಲೆಲ್ಲ ಆತಂಕದ ವಾತಾವರಣ ನಿರ್ಮಾಣಗೊಂಡಿದೆ. ತೊಂದರೆ ಕೊಡದಂತೆ ಬುದ್ದಿ ಹೇಳಲು ಹೋದರೆ ಇದು ನಿಮ್ಮ ಮನೆಯೇ, ನಿಮ್ಮ ಆಸ್ತಿಯೇ, ಸರ್ಕಾರದ ಆಸ್ತಿ. ಏನು ಬೇಕಾದರೂ ಮಾಡುತ್ತೇವೆ. ಕೇಳಲು ನೀವ್ಯಾರು ಎಂದು ಬೆದರಸಿ ಕಳಿಸುತ್ತಾರೆ ಎಂದು ಅಕ್ಕಪಕ್ಕದ ನಿವಾಸಿಗಳು ಅಲವತ್ತುಕೊಂಡಿದ್ದಾರೆ.
ಕಟ್ಟಡದ ನೆಲ ಅಂತಸ್ತಿನ ಪ್ರವೇಶ ಸ್ಥಳದಲ್ಲಿ ಕಬ್ಬಿಣದ ಗೇಟ್ ಅಳವಡಿಸಿ ಯಾರೂ ಒಳಗೆ ಪ್ರವೇಶಿಸದಂತೆ ಮಾಡಬೇಕು. ಇಲ್ಲವಾದಲ್ಲಿ ಅಕ್ಕಪಕ್ಕದ ನಿವಾಸಿಗಳಾಗಿರುವ ನಾವೇ ಮುಂದೆ ನಿಂತು ಪ್ರವೇಶ ಸ್ಥಳದಲ್ಲಿ ಮುಳ್ಳುಕಂಟಿಗಳನ್ನು ಹಚ್ಚಿ ಯಾರೂ ಓಳಗೆ ಹೋಗದಂತೆ ಬಂದ್ ಮಾಡುತ್ತೇವೆ ಎಂದು ಎಚ್ಚರಿಸಿರುವ ಅಕ್ಕಪಕ್ಕದ ನಿವಾಸಿಗಳು, ಪೊಲೀಸರು ಇಲ್ಲಿ ಮೇಲಿಂದ ಮೇಲೆ ಗಸ್ತು ತಿರುಗಿ ಪುಂಡರಿಗೆ ಬಿಸಿ ಮುಟ್ಟಿಸಿ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಅನುದಾನ ಬಿಡುಗಡೆ ಆಗದ ಕಾರಣ ಕಟ್ಟಡದ ಕೆಲಸ ಅರ್ಧಕ್ಕೆ ನಿಂತಿದೆ. ಅಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವುದರ ಬಗ್ಗೆ ಸಾರ್ವಜನಿಕರು ದೂರಿದ್ದಾರೆ. ಪೊಲೀಸ್ ಇಲಾಖೆಗೆ ಪತ್ರ ಬರೆಯುತ್ತೇವೆ. ಅನುದಾನ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದು ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ.
-ಶಿವಲೀಲಾ ಕೊಣ್ಣೂರ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ಮುದ್ದೇಬಿಹಾಳ.