ಅಫಜಲಪುರ: ಕೊರೋನಾ ಬಂದ ಬಳಿಕ ಎಲ್ಲರ ಆರ್ಥಿಕ ಪರಿಸ್ಥಿತಿ ಬಹಳಷ್ಟು ಹದಗೆಟ್ಟಿದೆ. ಅದರಲ್ಲೂ ಮಧ್ಯಮ ವರ್ಗ, ಬಡವರು, ರೈತರ ಪರಿಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಹೀಗಾಗಿ ಸಾಮೂಹಿಕ ವಿವಾಹಗಳಿಂದ ಬಡವರ ಆರ್ಥಿಕ ಕುಸಿತ ತಡೆಗಟ್ಟಲು ಸಾಧ್ಯವಾಗಲಿದೆ ಎಂದು ಅಳ್ಳಗಿ ಮಠದ ಶಾಂತಲಿಂಗ ಶಿವಾಚಾರ್ಯರು ಹೇಳಿದರು.
ಅಫಜಲಪುರ ತಾಲೂಕಿನ ಸುಕ್ಷೇತ್ರ ಚಿಂಚೋಳಿಯ ಗದ್ದುಗೇಶ್ವರ ಮಲ್ಲಿಕಾರ್ಜುನ ಮಠದ ಜಾತ್ರೆಯ ಪ್ರಯುಕ್ತ ನಡೆದ ಸಾಮೂಹಿಕ ವಿವಾಹ ಹಾಗೂ ಧರ್ಮ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಸಾಮಾನ್ಯವಾಗಿ ಒಂದು ಮದುವೆ ಮಾಡಬೇಕಾದರೆ ಸುಮಾರು ೨ ಲಕ್ಷಕ್ಕೂ ಹೆಚ್ಚು ಖರ್ಚು ಮಾಡಬೇಕಾಗುತ್ತದೆ.
ಕೋವಿಡ್ ನಂತರದ ಈ ಕಾಲದಲ್ಲಿ ಮದುವೆ ಮಾಡುವುದೇ ಪಾಲಕರಿಗೆ ದೊಡ್ಡ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಮಠ ಮಾನ್ಯಗಳಲ್ಲಿ ನಡೆಯುವ ಸಾಮೂಹಿಕ ಮದುವೆಗಳ ಸದುಪಯೋಗವನ್ನು ಭಕ್ತರು, ಸಾರ್ವಜನಿಕರು ಪಡೆದುಕೊಳ್ಳಬೇಕು. ಚಿಂಚೋಳಿ ಮಠದ ಗದ್ದುಗೇಶ್ವರ ಶಿವಾಚಾರ್ಯರು ಬಹಳ ದೊಡ್ಡ ಯೋಚನೆ ಮಾಡಿ ಸಾಮೂಹಿಕ ವಿವಾಹ ಏರ್ಪಡಿಸಿ ಬಡವರು, ರೈತರ, ಮಠದ ಭಕ್ತರ ಆರ್ಥಿಕ ಕುಸಿತ ತಪ್ಪಿಸುವ ಕೆಲಸ ಮಾಡಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದರು.
ಇನ್ನೂ ಸಣ್ಣ ಮಠಗಳು ಏಳಿಗೆ ಕಾಣುವಲ್ಲಿ ಬಡದಾಳ ಮಠದ ಪಾತ್ರ ಬಹಳ ದೊಡ್ಡದಾಗಿದೆ. ಬಡದಾಳದ ಡಾ. ಅಭಿನವ ಚನ್ನಮಲ್ಲ ಶಿವಾಚಾರ್ಯರು ನಮಗೆಲ್ಲ ಆಲದ ಮರವಿದ್ದಂತೆ. ಅವರ ಮಾರ್ಗದರ್ಶನದಲ್ಲಿ ಅನೇಕ ಮಠಗಳು ಪ್ರಗತಿಯತ್ತ ಸಾಗಿವೆ. ಅವರ ಉದಾರತೆಗೆ ಸಾಟಿ ಯಾರಿಲ್ಲ ಎಂದರು.
ಗದ್ದುಗೇಶ್ವರ ಮಲ್ಲಿಕಾರ್ಜುನ ಶಿವಾಚಾರ್ಯರು ನೇತೃತ್ವ ವಹಿಸಿ ಮಾತನಾಡಿ ಪ್ರತಿವರ್ಷದ ಪದ್ದತಿಯಂತೆ ಜಾತ್ರೆ ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿರಲಿಲ್ಲ. ಆದರೆ ಕೋವಿಡ್ ಬಳಿಕ ನಡೆಯುತ್ತಿರುವ ಜಾತ್ರೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕೆನ್ನುವ ಉದ್ದೇಶದಿಂದ ಸಾಮೂಹಿಕ ವಿವಾಹದ ನಿರ್ಧಾರ ಕೈಗೊಂಡಿದ್ದೆ. ಇದಕ್ಕೆ ಮಠದ ಭಕ್ತರು, ಗ್ರಾಮಸ್ಥರೆಲ್ಲ ಸಹಕಾರ ನೀಡಿದ್ದಾರೆ. ಮಠಕ್ಕೆ ಭಕ್ತರೇ ಆಸ್ತಿಯಾಗಿದ್ದಾರೆ. ಅವರಿಂದಾಗಿಯೇ ಇಂತಹ ದೊಡ್ಡ ಕೆಲಸಗಳು ಮಾಡಲು ಸಾದ್ಯವಾಗಿದೆ. ಬರುವ ವರ್ಷದಿಂದ ಇನ್ನಷ್ಟು ಸಮಾಜ ಮುಖಿ ಕೆಲಸಗಳನ್ನು ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ, ಸರ್ವ ಸದಸ್ಯರು, ಮಠದ ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರು ಸೇರಿದಂತೆ ಬಡದಾಳ, ಚಿಂಚೋಳಿ, ಮಾತೋಳಿ, ಹಳಿಯಾಳ, ಮಲ್ಲಾಬಾದ, ಬಳೂರ್ಗಿ, ರೇವೂರ ಸೇರಿದಂತೆ ಅನೇಕ ಗ್ರಾಮಗಳ ಭಕ್ತರು ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.