ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ 93 ನವ ಜೋಡಿಗಳಿಗೆ ಸಾಮೂಹಿಕ ವಿವಾಹ
ವರದಿ:ಚೇತನ್ ಕುಮಾರ್ ಎಲ್,ಚಾಮರಾಜನಗರ
ಹನೂರು: ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾದ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದ ರಂಗಮಂದಿರದ ಆವರಣದಲ್ಲಿ ಸೋಮವಾರ ಪ್ರಾಧಿಕಾರದ ವತಿಯಿಂದ ಉಚಿತ ಸಾಮೂಹಿಕ ವಿವಾಹ ಜರುಗಿತು. ಈ ಕಾರ್ಯಕ್ರಮದಲ್ಲಿ 93 ನವ ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಸೋಮವಾರ ಬೆಳಿಗ್ಗೆ 9:20 ರಿಂದ 10:10 ಗಂಟೆಗೆ ಸಲ್ಲುವ ಶುಭ ಕಟಕ ಲಗ್ನದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿಗಳು ಹಾಗೂ ಸಾಲೂರು ಬೃಹನ್ಮಠದ ಶ್ರೀ ಡಾ. ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ರವರ ಆಶೀರ್ವಾದದೊಂದಿಗೆ ಉಚಿತ ಸಾಮೂಹಿಕ ವಿವಾಹವು ಜರುಗಿತು.
ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಧುವಿಗೆ ಚಿನ್ನದ ಮಾಂಗಲ್ಯ, ಕಾಲುಂಗುರ, ಸೀರೆ, ರವಿಕೆ, ಮತ್ತು ವರನಿಗೆ ಶರ್ಟ್, ಪಂಚೆ, ಟವಲ್ ಹಾಗೂ ಪೇಟವನ್ನು ವಿತರಿಸಲಾಗಿತ್ತು.
ಶಾಸಕ ಎಂ ಆರ್ ಮಂಜುನಾಥ್ ಮಾತನಾಡಿ ಕ್ಷೇತ್ರದ ಅಧಿಪತಿಯವರ ಆರ್ಶಿವಾದದಿಂದ ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನವ ಜೋಡಿಗಳಿಗೆ ಮಾದೇಶ್ವರ ಆಶೀರ್ವಾದವನ್ನು ಕರುಣಿಸಲಿ. ಕ್ಷೇತ್ರದಲ್ಲಿ ಒಟ್ಟಾರೆ 1989ರಿಂದ 2024 ರವರೆಗೆ ಒಟ್ಟು1931 ಸಾಮೂಹಿಕ ವಿವಾಹ ಜರುಗಿದ್ದು, ಇಂದು 93 ನವ ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದ್ದಾರೆ . ಸಾಮೂಹಿಕ ವಿವಾಹ ಆಗುವುದರಿಂದ, ಲಕ್ಷಾಂತರ ರೂಗಳನ್ನು ಉಳಿಸಬಹುದಾಗಿದೆ.ಇಂತಹ ಕಾರ್ಯಕ್ರಮಕ್ಕೆ ಸುತ್ತೂರು ಶ್ರೀ ಗಳು ಹಾಗೂ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳ ಸಮ್ಮುಖದಲ್ಲಿ ನೆರವೇರಿಸಲಾಯಿತು. ಮಾದಪ್ಪನ ಭಕ್ತರ ದಂಡು ಹೆಚ್ಚಿನ ಪ್ರಮಾಣದಲ್ಲಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಹಾಗೂ ರಸ್ತೆ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಇಪ್ಪತ್ತು ಕೋಟಿ ಹಣ ಅನುದಾನವನ್ನು ಸರ್ಕಾರದಿಂದ ತಂದು ಅಭಿವೃದ್ಧಿ ಮಾಡಿದ್ದೇನೆ.ನವ ಜೋಡಿಗಳಿಗೆ ಶುಭವಾಗಲಿ ಎಂಬುದಾಗಿ ತಿಳಿಸಿದರು.
ಸುತ್ತೂರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಮಾತನಾಡಿ ಈ ಕ್ಷೇತ್ರದಲ್ಲಿ ವಿವಾಹ ಕಾರ್ಯ ಮಾಡಿರುವುದು ಶ್ಲಾಘನೀಯ ವಾಗಿದೆ. ಇಂತಹ ಪುಣ್ಯಕ್ಷೇತ್ರದಲ್ಲಿ ವಿವಾಹ ಜೀವನದಲ್ಲಿ ಕಾಲಿಟ್ಟ ನೀವೇ ದನ್ಯರು .ಮದುವೆಯಾದ ನಂತರ ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಂಡು ಜೀವನದಲ್ಲಿ ಅನ್ಯೋನ್ಯತೆಯಿಂದ ಜೀವನವನ್ನು ನಡೆಸಬೇಕು. ಪ್ರತಿಯೊಬ್ಬರು ಸ್ವತಂತ್ರರಾಗಿ ಜೀವನ ನಡೆಸಬೇಕು ಅಲ್ಲದೆ ಭಾರತೀಯ ಪರಂಪರೆಯಲ್ಲಿ ಸಂಸ್ಕಾರವಂತರಾಗಬೇಕು. ಮಕ್ಕಳಿಗೆ ಮಾರ್ಗದರ್ಶನ ನೀಡುವ ಮೂಲಕ ಮಾದರಿ ಜೀವನ ನಡೆಸಬೇಕು . ಶಾಸಕರು ಸಿಎo ರವರಿಗೆ ಆಪ್ತರಾಗಿರುವ ಕಾರಣ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಪ್ರಮಾಣದಲ್ಲಿ ಸಹಾಯವಾಗುತ್ತದೆ. ಕಾರ್ಯದರ್ಶಿಗಳು ಶಾಸಕರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಹೆಚ್ಚು ಹೊತ್ತು ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾಲೂರು ಬೃಹನ್ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳು, ಮೆಟ್ಟೂರು ಶಾಸಕರಾದ ಸದಾಶಿವಂ, ಪೊಲೀಸ್ ಅಧೀಕ್ಷಕರು ಕವಿತಾ ಬಿಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾರೋತ್, ಜಿಲ್ಲಾ ಗ್ಯಾರೆಂಟಿ ಯೋಜನೆಯ ಅಧ್ಯಕ್ಷ ಹೆಚ್ ವಿ ಚಂದ್ರು, ಪ್ರಾಧಿಕಾರದ ಕಾರ್ಯದರ್ಶಿಗಳಾದ ಎಇ ರಘು, ಗ್ರಾಮ ಪಂಚಾಯತಿ ಅಧ್ಯಕ್ಷರು ಶ್ರೀಮತಿ ಅರ್ಚನಾ, ಉಪ ಅಧೀಕ್ಷಕರು ಧರ್ಮೇಂದರ್, ತಾಲೂಕು ದಂಡಾಧಿಕಾರಿ ಶ್ರೀಮತಿ ಚೈತ್ರ, ನಾಮ ನಿರ್ದೇಶಕ ಸದಸ್ಯರುಗಳಾದ ಶ್ರೀಮತಿ ಭಾಗ್ಯಮ್ಮ, ಮಹದೇವಪ್ಪ ಮರಿಸ್ವಾಮಿ, ಆರ್‌ಎಸ್ ಕುಮಾರ್ ವಿಜಯ, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಪ್ರಾಧಿಕಾರದ ಸಿಬ್ಬಂದಿ ವರ್ಗದವರು ಹಾಜರಿದ್ದರು.



















