ಲಿಂಗಸುಗೂರು: ತಾಲೂಕು ಆಸ್ಪತ್ರೆಗೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದ್ದರೂ ನಿರ್ವಹಣೆ ಕೊರತೆಯಿಂದ ಸಾರ್ವಜನಿಕರಿಗೆ ಸವಲತ್ತುಗಳು ಮರೀಚಿಕೆಯಾಗಿವೆ. ಕಳೆದ ಮೂರಾಲ್ಕು ವರ್ಷಗಳ ಹಿಂದೆ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನಿಂಗ್ ಯಂತ್ರದ ಸೇವೆ ಆರಂಭಿಸಲಾಗಿದೆ. ಆರಂಭದ ಹಂತದಲ್ಲಿ ಯಂತ್ರದ ಉಪಯೋಗವಾಗಿದೆ. ಆದರೆ ಕಳೆದ ಒಂದು ತಿಂಗಳಿಂದ ಸಿಟಿ ಸ್ಕ್ಯಾನಿಂಗ್ ಯಂತ್ರ ಕೆಟ್ಟು ಹೋಗಿದ್ದು, ಯಂತ್ರ ಕೆಟ್ಟ ಪರಿಣಾಮದಿಂದ ಚಿಕಿತ್ಸೆಗೆಂದು ಬರುವ ರೋಗಿಗಳಿಗೆ ತೀವ್ರ ತೊಂದರೆ ಆಗುತ್ತಿದೆ. ಚಿಕಿತ್ಸೆಗೆ ಬಂದವರನ್ನು ಬಾಗಲಕೋಟ, ಬಳ್ಳಾರಿ, ರಾಯಚೂರು ಸೇರಿ ವಿವಿಧ ನಗರಗಳಿಗೆ ರೋಗಿಗಳನ್ನು ಕಳುಹಿಸಲಾಗುತ್ತಿದೆ. ಬಡರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೋಗಿಗಳ ಪರದಾಟಕ್ಕೆ ಕಡಿವಾಣ ಹಾಕಲು ಶೀಘ್ರ ಯಂತ್ರ ದುರಸ್ಥಿಗೆ ಕ್ರಮಕೈಗೊಳ್ಳಬೇಕು.
ಅಲ್ದೆ ಮುಖ್ಯವೈದ್ಯಾಧಿಕಾರಿಗಳಾಗಿದ್ದ ಹೃದಯರೋಗ ತಜ್ಞ ಡಾ.ಲಕ್ಷಪ್ಪರವರು ನಿವೃತ್ತರಾಗಿ ಒಂದು ವರ್ಷ ಕಳೆದಿದೆ. ಇದುವರೆಗೂ ಹೃದಯರೋಗ ತಜ್ಞರ ನೇಮಕ ಆಗಿಲ್ಲ. ಮಕ್ಕಳ ತಜ್ಞರ ಹುದ್ದೆ ಇದ್ದರೂ ಸಕಾಲಕ್ಕೆ ವೈದ್ಯರು ಇರುವುದಿಲ್ಲ. ಕೂಡಲೇ ಸರಕಾರಿ ಆಸ್ಪತ್ರೆಗೆ ತಜ್ಞ ಹೃದ್ರೋಗ ವೈದ್ಯರು, ಮಕ್ಕಳ ತಜ್ಞರ ಖಾಯಂ ಹುದ್ದೆಗಳಿಗೆ ನೇಮಕ ಮಾಡಬೇಕೆಂದು ಕರವೆ ಕಾರ್ಯಕರ್ಯರು ಶಾಸಕ ಹೂಲಗೇರಿ ಅವರಿಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.