ಜೋಗಿ ಸಮಾಜದ ಸಾಮಾಜಿಕ ನ್ಯಾಯಕ್ಕಾಗಿ ಅಧಿವೆಶನದಲ್ಲಿ ಧ್ವನಿ: ಶಾಸಕ ಯತ್ನಾಳ
ವಿಜಯಪುರ: ಜೋಗಿ ಸಮಾಜಕ್ಕೆ ದೊರೆಯಬೇಕಿರುವ ಸಾಮಾಜಿಕ ನ್ಯಾಯ ಕಲ್ಪಿಸಲು ಬರುವ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದರು.
ನಗರದ ಪೊಲೀಸ್ ಕ್ವಾಟರ್ಸ್ ಹತ್ತಿರದ ಜೋಗಿ ಗಲ್ಲಿಯ ಶ್ರೀ ಮರಗಮ್ಮ ದೇವಿ ದೇವಸ್ಥಾನ ಉದ್ಘಾಟಿಸಿ ಮಾತನಾಡಿದ ಅವರು, ಜೋಗಿ ಸಮಾಜ ಎಂದಿಗೂ ನಮ್ಮ ಕೈಬಿಟ್ಟಿಲ್ಲ. ಪ್ರತಿ ಚುನಾವಣೆಯಲ್ಲೂ ಬೆಂಬಲಿಸಿದ್ದಿರಿ. ಮರಗಮ್ಮ ದೇವಸ್ಥಾನಕ್ಕೆ ನಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ರೂ.10 ಲಕ್ಷ ನೀಡುವುದಾಗಿ ಘೋಷಿಸಿದರು.
ಜನಗಣತಿ ಆಧಾರದ ಮೇಲೆ ಮೀಸಲಾತಿ ಪಡೆಯಲು ಅನುಕೂಲ ಆಗುತ್ತದೆ. ಹೀಗಾಗಿ ಜನಗಣತಿ ಬಂದಾಗ ಸರಿಯಾಗಿ ಬರೆಯಿಸಬೇಕು. 27 ಉಪಜಾತಿ ಗಳಿರುವ ಈ ಜೋಗಿ ಸಮಾಜಕ್ಕೆ ಈಗಾಗಲೇ ಸಾಮಾಜಿಕ ನ್ಯಾಯ ದೊರೆಯಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಿಕ್ಕಿಲ್ಲ. ಬರುವ ಅಧಿವೇಶನದಲ್ಲಿ ಧ್ವನಿ ಎತ್ತಿ ತಮಗೆ ನ್ಯಾಯ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮೊದಲು ಶ್ರೀ ಮರಗಮ್ಮ ದೇವಿ ದರ್ಶನಾಶೀರ್ವಾದ ಪಡೆದುಕೊಂಡು, ನಾಡಿಗೆ ಒಳಿತಾಗಲೆಂದು ಪ್ರಾರ್ಥಿಸಿದರು. ಇದೇ ವೇಳೆ ಆತ್ಮೀಯವಾಗಿ ಸನ್ಮಾನಿಸಿದರು. ಬಳಬಟ್ಟಿಯ ಶ್ರೀಗುರು ಗೋರಕ್ಷಾನಾಥ ಜೋಗಿ ಮಠದ ಯೋಗಿ ನಿವೃತ್ತಿನಾಥ ಅಗೋರಿ, ಮರಗಮ್ಮದೇವಿ ಸೇವಾ ಸಮಿತಿ ಅಧ್ಯಕ್ಷ ಗುರುವರ್ಯ ರಾಹುಲ್ ಪೂಜಾರಿ, ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ಬಿಜೆಪಿ ನಗರ ಮಂಡಲ ಮಾಜಿ ಅಧ್ಯಕ್ಷ ಶಂಕರ ಹೂಗಾರ, ಅಖಿಲ ಕರ್ನಾಟಕ ಜೋಗಿ ಸಮಾಜದ ಅಧ್ಯಕ್ಷ ಶಿವಾಜಿ ಮಧುರಕರ, ಮರಗಮ್ಮ ಗುಡಿ ಜೋಗಿ ಸಮಾಜದ ಸೇವಾ ಸಮಿತಿ ಅಧ್ಯಕ್ಷ ನಾನಾ ಕಾಸಾರ, ಉಪಾಧ್ಯಕ್ಷ ಭಗವಾನ ಕಾಸಾರ, ಕಾರ್ಯದರ್ಶಿ ತುಕಾರಾಮ ಹಿಂಗಮೋರೆ, ಖಜಾಂಚಿ ದೊಂಡಿಬಾ ಲೋಣಾರಿ ಸೇರಿದಂತೆ ಮತ್ತಿತರರು ಇದ್ದರು.