ವಿಜಯಪುರದಲ್ಲಿ ಬೃಹತ್ ತ್ರಿವರ್ಣ ಧ್ವಜದ ಮೆರವಣಿಗೆ ..!
ವಿಜಯಪುರ : ಬರೋಬ್ಬರಿ ೧ ಕಿ.ಮೀ. ಉದ್ದದ ತ್ರಿವರ್ಣ ಧ್ವಜವನ್ನು ಹೊತ್ತ ಸಾವಿರಾರು ಯುವಕರ ದಂಡು, ಮುಗಿಲು
ಮುಟ್ಟಿದ ಜೈ ಜವಾನ್ ಜೈ ಕಿಸಾನ್ ಉದ್ಘೋಷಗಳು….ವೀರ ಜವಾನ್ ಅಮರ್ ರಹೇ….ವೀರ ಜವಾನ್ ಅಮರ ರಹೇ….
ಮಾನವೀಯತೆ ಶತ್ರುಗಳಾಗಿರುವ ಉಗ್ರಗಾಮಿಗಳ ವಿರುದ್ದ ಸಮರ ಸಾರಿರುವ ಭಾರತೀಯ ಹೆಮ್ಮೆಯ ವೀರಯೋಧರ ಆಯುರಾರೋಗ್ಯ ಹಾಗೂ ಆತ್ಮಸ್ಥೈರ್ಯ ಹೆಚ್ಚಿಸಲು ಹಾಗೂ ಕಾರ್ಯಾಚರಣೆ ನಡೆಸಲು ದಿಟ್ಟ ಶಕ್ತಿಯಾಗಿ ನಿಂತ ಪ್ರಧಾನಿ ಮೋದಿ ಅವರ ಆಯುರಾರೋಗ್ಯಕ್ಕಾಗಿ ಯುವ ಭಾರತ ಸಮಿತಿ ಆಯೋಜಿಸಿದ್ದ ತಿರಂಗಾ ಯಾತ್ರೆಯ ದೃಶ್ಯಗಳಿವು.
ಶ್ರೀ ಸಿದ್ದೇಶ್ವರ ದೇವಾಲಯದಲ್ಲಿ ಜಮಾಯಿಸಿದ್ದ ನೂರಾರು ಯುವಕರು ವೀರ ಸೈನಿಕರ ಬಗ್ಗೆ ಅಪಾರ ಗೌರವ ಶ್ರದ್ದೆ ಇರಿಸುವ ಭಾವನೆಯೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಒಂದು ಕಿ.ಮೀ. ಉದ್ದ ಬೃಹತ್ ತ್ರಿವರ್ಣ ಧ್ವಜವನ್ನು ಹಿಡಿದು ಶಿಸ್ತುಬದ್ಧ ಹೆಜ್ಜೆ ಹಾಕಿದರು. ಭಾರತಮಾತೆಯ ದಿವ್ಯ ಸ್ವರೂಪದ ಭಾವಚಿತ್ರ ಹಾಗೂ ವಿರಯೋಧರ ಭಾವಚಿತ್ರ ಹೊತ್ತ ಅಲಂಕೃತ ವಾಹನ ಮೆರವಣಿಗೆಯಲ್ಲಿ ಸಾಗಿತು. ಭಾರತ ಮಾತಾ ಕೀ ಜೈ….ಭಾರತ ಮಾತಾ ಕೀ ಜೈ…ಜೈ ಜವಾನ್ ಜೈ ಕಿಸಾನ್..ಎಂಬಿತ್ಯಾದಿ ಘೋಷಣೆ ಮೊಳಗಿಸಿ ವೀರ ಸೈನಿಕರೇ ಉಗ್ರರ ಸಂಹರಿಸುವ ಹೋರಾಟದಲ್ಲಿ ನಾವು ನಿಮ್ಮೊಂದಿಗೆದ್ದೇವೆ ಎಂಬ ಸಂದೇಶವನ್ನು ರವಾನಿಸಿದರು. ಸಾವಿರಾರು ಯುವಕರು ಬೃಹತ್ ತ್ರಿವರ್ಣ ಧ್ವಜದ ಸನ್ನಿಧಿಯಲ್ಲಿ ಬಾವುಟ ಹಿಡಿದು ದೇಶಭಕ್ತಿಯ ಭಾವದಲ್ಲಿ ಮಿಂದೆದ್ದರು. ಮೆರಣಿಗೆ ವೀಕ್ಷಿಸಿದ ಪ್ರತಿಯೊಬ್ಬರು ಸಹ ತ್ರಿವರ್ಣ ಧ್ವಜಕ್ಕೆ ಗೌರವಿಸಿ ಸೈನಿಕರಿಗೆ ಸೆಲ್ಯೂಟ್ ಹೇಳುತ್ತಾ ಸಾಗಿದರು.
ನಮ್ಮ ವೀರ ಸೈನಿಕರು ನಮಗಾಗಿ ಯುದ್ದ ಮಾಡುತ್ತಿದ್ದಾರೆ, ಉಗ್ರರ ಸಂಹಾರಕ್ಕಾಗಿ ಸಂಕಲ್ಪ ಮಾಡಿದ್ದಾರೆ, ಅವರಿಗೆ ದೇವರು ಇನ್ನಷ್ಟು ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸಿದ್ದೇವೆ, ಅವರ ಆತ್ಮ ಸ್ಥೈರ್ಯ ಇನ್ನಷ್ಟು ವೃದ್ದಿಯಾಗಲು ಈ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿರುವೆ ಎಂದು ಅನೇಕ ಯುವಕ, ಯುವತಿಯರು ನುಡಿದರು.
ಶ್ರೀ ಸಿದ್ದೇಶ್ವರ ದೇವಾಲಯದಿಂದ ಆರಂಭಗೊಂಡ ಭವ್ಯ ಯಾತ್ರೆ ಮಹಾತ್ಮಾ ಗಾಂಧಿ ವೃತ್ತ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ತಲುಪಿ ಸಂಪನ್ನಗೊಂಡಿತು.
ಅಲ್ಲಿ ನಡೆದ ಸಭೆಯ ಸಾನಿಧ್ಯ ವಹಿಸಿದ್ದ ರಾಮಕೃಷ್ಣ ಆಶ್ರಮದ ಶ್ರೀ ನಿರ್ಭಯಾನಂದ ಸ್ವಾಮೀಜಿಯವರುಸ್ವಾಮೀಜಿ ಆಶೀರ್ವಚನ ನೀಡಿ, ಉಗ್ರಗಾಮಿಗಳು ರಾಕ್ಷಸರಿದ್ದಂತೆ, ಮಾನವೀಯತೆ ಶತ್ರುಗಳಾಗಿರುವ ಉಗ್ರಗಾಮಿಗಳು ಅಮಾಯಕ ಪ್ರವಾಸಿಗರ ಮೇಲೆ ದಾಳಿ ನಡೆಸಿರುವುದು ಅತ್ಯಂತ ನೋವಿನ ಸಂಗತಿ, ಈ ಘಟನೆಯಿಂದ ಭಾರತೀಯರು, ಅನಿವಾಸಿ ಭಾರತೀಯರು, ವಿದೇಶಿಗರು ಕಣ್ಣೀರಿಟ್ಟಿದ್ದಾರೆ, ದೇಶದ ಈ ಘಟನೆ ಅನಿವಾಸಿ ಭಾರತೀಯರನ್ನು ವಿಚಲಿತರನ್ನಾಗಿಸಿದೆ ಎಂದರು.
ನಮಗೆ ದೇಶವೇ ಮೊದಲು, ದೇಶವೇ ಆದ್ಯ, ನಮ್ಮ ಸೈನಿಕರು ಧೈರ್ಯ, ಪರಾಕ್ರಮಕ್ಕೆ ಹೆಸರುವಾಸಿ, ಪ್ರತಿಭೆ ಹಾಗೂ ಧೈರ್ಯದಲ್ಲಿ ಭಾರತಕ್ಕೆ ಯಾರೂ ಸರಿಗಟ್ಟಲು ಸಾಧ್ಯವಿಲ್ಲ, ನ್ಯೂರ್ಯಾರ್ಕ್ ಸೇರಿದಂತೆ ಹಲವಾರು ಪ್ರತಿಷ್ಠಿತ ನಗರಗಳಲ್ಲಿ ವಿಶ್ವವಿದ್ಯಾಲಯ, ಕಂಪನಿಗಳಲ್ಲಿ ಭಾರತೀಯರ ಪಾಲೇ ಅಧಿಕವಾಗಿದೆ ಎಂದರು. ಭಾರತೀಯ ಸೈನಿಕರ ಜೊತೆ ನಾವು ಸದಾ ಬೆನ್ನೆಲುಬಾಗಿ ನಿಲ್ಲಬೇಕು, ಅವರಿಗಾಗಿ ತಿರಂಗಾ ಯಾತ್ರೆ ನಡೆಸುತ್ತಿರುವುದು ಅರ್ಥ ಪೂರ್ಣ ಕಾರ್ಯ ಎಂದರು.
ಕಾರ್ಯಕ್ರಮದ ರೂವಾರಿ ಯುವ ಭಾರತ ಸಮಿತಿ ಸಂಸ್ಥಾಪಕ ಉಮೇಶ ಕಾರಜೋಳ ಮಾತನಾಡಿ, ಮನಸ್ಸು ಹಾಗೂ ಮನುಷ್ಯತ್ವವೇ ಇಲ್ಲದ ಕ್ರೂರ ಉಗ್ರಗಾಮಿಗಳು ಮುಗ್ದ ಪ್ರವಾಸಿಗರ ಜೀವ ತೆಗೆದು ವಿಕೃತಿ ಮೆರೆದಿದ್ದರು, ಇಡೀ ವಿಶ್ವವೇ ಈ ಘಟನೆಯಿಂದ ಮರುಗಿತ್ತು, ಉಗ್ರಗಾಮಿಗಳು ಸರ್ವನಾಶವಾಗಬೇಕು ಎಂಬ ಸಂದೇಶ ರವಾನಿಸಿತ್ತು.
ಶೌರ್ಯ, ಪರಾಕ್ರಮಗಳಿಗೆ ಹೆಸರಾದ ನಮ್ಮ ಭಾರತೀಯ ಸೈನಿಕರು ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿ ಮಾನವೀಯತೆ ವಿರೋಧಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ. ಆಪರೇಷನ್ ಸಿಂಧೂರ ಹೆಸರಿನಲ್ಲಿ ಉಗ್ರಗಾಮಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ.
ಪಾಕಿಸ್ತಾನ ಉಗ್ರಗಾಮಿಗಳನ್ನು ಪೋಷಿಸುತ್ತಿದೆ. ಉಗ್ರರು ಇಡೀ ಮಾನವೀಯತೆ ವಿರೋಧಿಗಳು, ಅವರನ್ನು ಸಂಹಾರ ಮಾಡಿರುವ ನಮ್ಮ ಹೆಮ್ಮೆಯ ಸೈನಿಕರ ಋಣ ತೀರಿಸಲು ಸಾಧ್ಯವಿಲ್ಲ ಎಂದರು. ಶರಣಯ್ಯ ಬಂಡಾರಿಮಠ,ಬಸವರಾಜ ಯಾದವಾಡ, ಕುಮಾರ ಕಟ್ಟಿಮನಿ, ಬಸವರಾಜ ಪತ್ತಾರ, ಅನೀಲ ಧನಶ್ರೀ ,ವಿರೇಶ ಗೊಬ್ಬೂರ, ಸಂತೋಷ ಝಳಕಿ, ಶಿವಪುತ್ರ ಪೊಪಡಿ, ಕಲ್ಮೇಶ ಅಮರಾವತಿ, ಪೂಜಾ ಬಾಗಿ, ಶ್ರೀಶೈಲ ಮಳಜಿ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.