ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ, ಪ್ರಬುದ್ಧತೆ, ಸಂಸ್ಕಾರ, ಪಕ್ವತೆಗೆ ಸಾಕ್ಷಿಯಾಗಿದ್ದಾರೆ..! ಯಾರು ಗೊತ್ತಾ..?
ವಿಜಯಪುರ, ಆ. 01: ಸಂಸ್ಥೆಗಳ ಕಷ್ಟದ ದಿನಗಳಲ್ಲಿ ಗಟ್ಟಿಯಾಗಿ ನಿಂತು ಹೋರಾಟ ಮಾಡಿದವರ ಸೇವೆ ಸದಾ ಸ್ಮರಣೀಯವಾಗಿರುತ್ತದೆ ಎಂದು ಬಿ. ಎಲ್. ಡಿ. ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಮಾಜಿ ಶಾಸಕ ಜಿ. ಕೆ. ಪಾಟೀಲ ಹೇಳಿದ್ದಾರೆ.
ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತ ಕಚೇರಿಯ ಅಧೀಕ್ಷಕ ಎಸ್. ಎ. ಬಿರಾದಾರ(ಕನ್ನಾಳ) ಮತ್ತು ವಾಹನ ಚಾಲಕ ಎಸ್. ಎಸ್. ಬಡಿಗೇರ ಅವರ ಸೇವಾ ನಿವೃತ್ತಿ ಅಂಗವಾಗಿ ನಗರದಲ್ಲಿ ಬುಧವಾರ ಮುಸ್ಸಂಜೆ ಆಯೋಜಿಸಲಾದ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲರೂ ಸಂಸ್ಥೆಯನ್ನು ಕಟ್ಟಿ, ಬೆಳೆಸಿ, ಕೀರ್ತಿ, ಘನತೆಯನ್ನು ಹೆಚ್ಚಿಸುವ ಕೆಲಸ ಮಾಡಬೇಕು. ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರು, ಕಷ್ಟದ ಪರೀಕ್ಷೆಯ ಸಮಯದಲ್ಲಿ ಎದುರಾಗುವ ಸಮಸ್ಯೆಗಳನ್ನು ಹೇಗೆ ಗಟ್ಟಿಯಾಗಿ ನಿಂತು ಬಗೆಹರಿಸಿ ಸಂಸ್ಥೆಯ ಏಳಿಗೆಗೆ ದುಡಿಯಬಹುದು ಎಂಬುದಕ್ಕೆ ಕನ್ನಾಳ ಗೌಡ್ರು(ಎಸ್. ಎ. ಬಿರಾದಾರ) ಮಾದರಿಯಾಗಿದ್ದಾರೆ. ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ, ಪ್ರಬುದ್ಧತೆ, ಸಂಸ್ಕಾರ, ಪಕ್ವತೆಗೆ ಸಾಕ್ಷಿಯಾಗಿದ್ದಾರೆ. ನೇರವಾಗಿ ಹೇಳುವ ಛಾತಿ ಹೊಂದಿದ್ದಾರೆ. ಬಿ.ಎಲ್.ಡಿ.ಇ ಸಂಸ್ಥೆಯ ಲೆಜೆಂಡ್ ಆಗಿದ್ದಾರೆ. ಅವರ ಕೆಲಸಗಳು ಸದಾ ಸ್ಮರಣೀಯವಾಗಿವೆ. ದೇವರು ಇವರಿಗೆ ಆಯೂರಾರೋಗ್ಯ ನೀಡಲಿ. ನಿವೃತ್ತಿಯ ಬಳಿಕ ಮಾನಸಿಕ ಸಮಾಧಾನ ಮುಖ್ಯವಾಗಿದ್ದು, ಅದು ಅವರಿಗೆ ಸಿಗಲಿ ಎಂದು ಅವರು ಶುಭ ಹಾರೈಸಿದರು. ಚಾಲಕ ಎಸ್. ಎಸ್. ಬಡಿಗೇರ ಪ್ರಾಮಾಣಿಕ ಮತ್ತು ಶಿಸ್ತುಬದ್ಧ ಕೆಲಸಗಾರರಾಗಿದ್ದಾರೆ ಎಂದು ಅವರು ಹೇಳಿದರು.
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಸಚಿವ ಎಂ. ಬಿ. ಪಾಟೀಲ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆ, ಎಂ. ಬಿ. ಪಾಟೀಲ ಅವರ ಸಂಕಷ್ಟದ ಸಮಯದಲ್ಲಿ ಕನ್ನಾಳ ಗೌಡ್ರು ಪ್ರಾಮಾಣಿಕವಾಗಿ ನಿಂತಿದ್ದಾರೆ. ಮುಖ್ಯವಾಹಿನಿ ಮತ್ತು ಪ್ರಚಾರದಿಂದ ದೂರವಿದ್ದು ಜವಾಬ್ದಾರಿಯುತ ಕೆಲಸ ಮಾಡಿದ್ದಾರೆ. ಬಿ. ಎಂ. ಪಾಟೀಲರೊಂದಿಗೆ ಸೇವೆ ಪ್ರಾರಂಭಿಸಿದ ಅವರು ಸಚಿವ ಎಂ. ಬಿ. ಪಾಟೀಲ, ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಮತ್ತು ಸಂಸ್ಥೆಯ ನಿರ್ದೇಶಕ ಬಸನಗೌಡ ಪಾಟೀಲ ಅವರ ಜೊತೆ ಸೇರಿ ಮೂರು ತಲೆಮಾರಿನವರ ಜೊತೆ ಕೆಲಸ ಮಾಡುತ್ತಿದ್ದಾರೆ. ಅವರ ಕ್ರಿಯಾಶೀಲತೆ ನೋಡಿದರೆ ಅವರು ನಿವೃತ್ತಿಗೆ ಅನಿಸುವುದಿಲ್ಲ. ಎವರಗ್ರೀನ್, ಹಾಟ್ ಚೇರ್ ನಲ್ಲಿ ಕುಳಿತು 40 ವರ್ಷ ಸೇವೆ ಸಲಿಸಿದರೂ ಬಿಪಿ, ಶುಗರ್ ಬಾರದಿರುವುದು ಅವರ ಆರೋಗ್ಯದ ಗುಟ್ಟು ಅಚ್ಚರಿ ಮೂಡಿಸುತ್ತದೆ. ಸಂಸ್ಥೆಗೆ ಅವರು ಸಲ್ಲಿಸಿದ ಸೇವೆ ಅಸಾಮಾನ್ಯ. ಎಲ್ಲರೊಂದಿಗೂ ಯಾವುದೇ ಭೇದಭಾವ ಇಲ್ಲದೇ, ಒತ್ತಡದಲ್ಲಿ ಅಚ್ಚುಕಟ್ಟಿನ ಕೆಲಸ ಮಾಡಿದ್ದಾರೆ. ಚಾಲಕ ಸುರೇಶ ಬಡಿಗೇರ ನಮ್ಮ ಜೀವ ಉಳಿಸಿದ ವ್ಯಕ್ತಿ. ಅವರನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಬಿ.ಎಲ್.ಡಿ.ಇ ಡೀಮ್ಡ್ ವಿವಿ ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ ಮಾತನಾಡಿ, ಸಂಸ್ಥೆಯಲ್ಲಿ ಆಡಳಿತ ಸುಗಮವಾಗಿ ನಡೆಯಲು ಎಸ್. ಎ. ಬಿರಾದಾರ ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಅವರು ಬೆಂಬಲಿಸಿ ಸಹಕರಿಸಿದ್ದರಿಂದ ಆಡಳಿತ ಸುಧಾರಣೆಗೆ ನೆರವಾಯಿತು. ಸೇವೆಗೆ ಅವರು ಮಾದರಿಯಾಗಿದ್ದಾರೆ. ವೃತ್ತಿಯ ಜೊತೆ ನಡವಳಿಕೆಯ ಮೂಲಕವೂ ಎಲ್ಲರಿಗೂ ಸ್ಮರಣೀಯರಾಗಿದ್ದಾರೆ. ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.
ನ್ಯಾಯವಾದಿ ಸುರೇಶ ಹಕ್ಕಿ ಮಾತನಾಡಿ, ಎಸ್. ಎ. ಬಿರಾದಾರ(ಕನ್ನಾಳ) ಅವರಲ್ಲಿ ಐಡೆಂಟಿಟಿ ಮೋಟಿವೇಶನ್ ಇದೆ. ಸಂಸ್ಥೆಯ ಜೊತೆ ಗುರುತಿಸಿಕೊಳ್ಳುವ ಅವರ ಸ್ವಭಾವ ಎಲ್ಲರಿಗೂ ಪ್ರೇರಣೆಯಿದೆ ಎಂದು ಹೇಳಿದರು.
ಆರ್. ವೈ. ತೊರವಿ ರಚಿಸಿದ ಕನ್ನಾಳದ ಕಂದ ಕವನ ವಾಚಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್. ಎ. ಬಿರಾದಾರ(ಕನ್ನಾಳ) ತಾವು ಸಂಸ್ಥೆಯೊಂದಿಗೆ ಹೊಂದಿರುವ ಅವಿನಾಭಾವ ಸಂಬಂಧ, ಸಂಸ್ಥೆಯಲ್ಲಿ ತಾವು ಸಲ್ಲಿಸಿದ ಸೇವೆ, ತಮಗೆ ನೆರವಾದ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಿಬ್ಬಂದಿಯ ಸಹಕಾರವನ್ನು ಸ್ಮರಿಸಿದರು.
ಈ ವೇಳೆ ಎಸ್. ಎ. ಬಿರಾದಾರ(ಕನ್ನಾಳ) ಮತ್ತು ಅವರ ಪತ್ನಿ, ವಿದ್ಯಾ ಎಸ್. ಬಿರಾದಾರ ಮತ್ತು ಚಾಲಕ ಎಸ್. ಎಸ್. ಬಿರಾದಾರ ಹಾಗೂ ಅವರ ಪತ್ನಿ ಶೈಲಶ್ರೀ ಬಡಿಗೇರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿಗಳಾದ ಡಾ. ಆರ್. ಬಿ. ಕೊಟ್ನಾಳ, ಆಯ್. ಎಸ್. ಕಾಳಪ್ಪನವರ, ಎಸ್. ಎಚ್. ಲಗಳಿ, ಬಿ. ಆರ್. ಪಾಟೀಲ, ಕೆ. ಜಿ. ಪೂಜಾರಿ, ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಕಚೇರಿ ಅಧಿಕಾರಿಗಳು, ಸಿಬ್ಬಂದಿ, ನಾನಾ ಶಾಲೆ, ಕಾಲೇಜುಗಳ ಆಡಳಿತಾಧಿಕಾರಿಗಳು, ಪ್ರಾಚಾರ್ಯರು, ಸಿಬ್ಬಂದಿ, ಮುಂತಾದವರು ಉಪಸ್ಥಿತರಿದ್ದರು.
ಡಾ. ಎಂ. ಎಸ್. ಮದಭಾವಿ ಸ್ವಾಗತಿಸಿದರು. ಡಾ. ಗಿರೀಶ ಅಕಮಂಚಿ ಶ್ಲೋಕ ಪಠಿಸಿದರು. ಡಾ. ವಿ. ಡಿ. ಐಹೊಳ್ಳಿ ವಂದಿಸಿದರು.