ಮುದ್ದೇಬಿಹಾಳ: ಪುರಸಭೆ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ, ತಾಲೂಕು ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರತಿಭಾ ರುದ್ರಗೌಡ ಅಂಗಡಗೇರಿ ಅವರು ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಬುಧವಾರ ಬೆಳಿಗ್ಗೆ ಹುಡ್ಕೋದ ಹಸಿರು ತೋರಣ ಗಾರ್ಡನ್‌ನಲ್ಲಿ ಪುರಸಭೆ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡರ ಬಳಿ ತೆರಳಿ ಬಹಿರಂಗವಾಗಿಯೇ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು.
ಪತ್ರ ಸ್ವೀಕರಿಸಿದ ನಾಡಗೌಡರು ಆಯ್ತು, ನೋಡೋಣ ಎಂದಷ್ಟೇ ಹೇಳಿ ಸ್ಥಳದಿಂದ ನಿರ್ಗಮಿಸಿದರು. ಪುರಸಭೆ ಮುಖ್ಯಾಧಿಕಾರಿ, ಸಿಬ್ಬಂದಿಯವರು ಯಾವುದೇ ಕೆಲಸ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ನಿಖರವಾದ ಮಾಹಿತಿಗಳನ್ನು ಕೊಡುತ್ತಿಲ್ಲ. ಈ ಕುರಿತು ಹಲವು ಬಾರಿ ನಿಮ್ಮ (ಶಾಸಕರ) ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದರಿಂದ ನೊಂದು ಸ್ವ ಇಚ್ಚೆಯಿಂದ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ. ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯ್ಕಮಕ್ಕಳ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಕಾಂಗ್ರೆಸ್‌ನ ಪುರಸಭೆ ಸದಸ್ಯರು, ಹಸಿರು ತೋರಣ ಬಳಗದ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಇದ್ದರು. ೫ ವರ್ಷಗಳ ಹಿಂದೆ ಪುರಸಭೆಗೆ ಚುನಾವಣೆ ನಡೆದಾಗ ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದ ಪ್ರತಿಭಾ ಅವರು ತಮ್ಮ ಹತ್ತಿರದ ಬಂಧುಗಳೂ ಆಗಿರುವ ನಾಡಗೌಡರಿಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ಸೇರ್ಪಡೆಗೊಂಡರು. ನಂತರ ಪುರಸಭೆಯ ಮೊದಲ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿ ಕಾರ್ಯನಿರ್ವಹಿಸಿದ್ದರು. ನಾಡಗೌಡರ ಆಪ್ತ ಬಳಗದಲ್ಲಿದ್ದ ಪ್ರತಿಭಾ ಅವರ ರಾಜೀನಾಮೆ ಪಕ್ಷದ ಆಂತರಿಕ ವಲಯದಲ್ಲಿ ಸಂಚಲನ ಮೂಡಿಸಿದ್ದು ಸಾಕಷ್ಟು ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ. ಶಾಸಕರಿಗೆ ಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೂ ರಾಜೀನಾಮೆ ಪ್ರಸ್ತಾಪ ಇಡಲಾಗಿತ್ತು. ಪುರಸಭೆಯಲ್ಲಿ ವ್ಯವಸ್ಥೆ ಸರಿ ಹೋಗುವ ನಿರೀಕ್ಷೆ ಇತ್ತು. ಆದರೆ ಸಮಸ್ಯೆಯನ್ನು ಬಗೆಹರಿಸಲು ಗಂಭೀರವಾಗಿ ಪ್ರಯತ್ನಿಸದಿರುವುದರಿಂದ ನೊಂದುಕೊಂಡು ರಾಜೀನಾಮೆ ನೀಡಿದ್ದೇನೆ. ಪಕ್ಷದ ಬ್ಲಾಕ್ ಅಧ್ಯಕ್ಷರು ಸೇರಿ ಸಂಬಂಧಿಸಿದವರೆಲ್ಲರಿಗೂ ರಾಜೀನಾಮೆ ಪತ್ರ ಕಳಿಸುತ್ತೇನೆ. ಪಕ್ಷದ ಎಲ್ಲ ಚಟುವಟಿಕೆಗಳಿಂದ ತಟಸ್ಥಳಾಗಿ ಉಳಿಯುತ್ತೇನೆ ಎಂದು ಗದ್ಗದಿತರಾಗಿ ತಿಳಿಸಿದರು.